ಮೈಸೂರು : ಸಾಂಸ್ಕೃತಿಕ ನಗರಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಮನೆ ಮುಂದೆ ಕಾರು ನಿಲ್ಲಿಸುವಾಗ ಮಾಲೀಕರು ಹುಷಾರಾಗಿರಬೇಕಾಗಿದೆ. ಏಕೆಂದ್ರೆ ಮನೆ ಮುಂದೆ ಕಾರು ನಿಲ್ಲಿಸಿದ್ದರೂ ಕಳ್ಳರ ಕಾಟ ತಪ್ಪುತ್ತಿಲ್ಲ.
ಹೌದು, ಮಾಲೀಕರೇ ನೀವು ಮನೆ ಮುಂದೆ ನಿಲ್ಲಿಸಿದ ಕಾರು ಸೇಫ್ ಆಗಿದೆ ಅಂತಾ ಅನ್ಕೋಬೇಡಿ. ಕಾರು ನಿಂತಲ್ಲೇ ಇರುತ್ತೆ. ಆದ್ರೆ ಕಾರೊಳಗಿನ ಬೆಲೆಬಾಳುವ ಸಾಮಗ್ರಿಗಳು ಮಾತ್ರ ಮಂಗಮಾಯವಾಗುತ್ತವೆ. ನಗರದ ಒಂಟಿಕೊಪ್ಪಲಿನಲ್ಲಿ ಕಳ್ಳರ ಕೈಚಳಕ ಹೆಚ್ಚಾಗಿದ್ದು, ನಕಲಿ ಕೀ ಬಳಸಿ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಸಾಮಗ್ರಿ ಕದ್ದೊಯ್ದ ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ರೀತಿ ರಾತ್ರಿ ಕಳ್ಳರ ಕೈಚಳಕಕ್ಕೆ ಮೈಸೂರಿಗರು ಕಂಗಾಲಾಗಿದ್ದಾರೆ. ಒಂಟಿಕೊಪ್ಪಲಿನ ಗೋವಿಂದಪ್ಪ ಕಾಂಪ್ಲೆಕ್ಸ್ ಬಳಿ ದೀಪಕ್ ಎಂಬುವರು ತಮ್ಮ ಮನೆ ಮುಂದೆ ಕಾರು ನಿಲ್ಲಿಸಿದರು. ರಾತ್ರಿ ಹೊತ್ತಿನಲ್ಲಿ ಕಳ್ಳನೊಬ್ಬ ಕಾರಿನ ಡೋರ್ ತೆಗೆದು ಒಳನುಗ್ಗಿದ್ದಾನೆ. ಬಳಿಕ ಎಲ್ಇಡಿ ಟಿವಿ, ಸ್ಪೀಕರ್‌ಗಳನ್ನ ಕದ್ದೊಯ್ದಿದ್ದಾನೆ. ಕಳ್ಳತನ ಕೃತ್ಯವೆಲ್ಲವೂ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರಾತ್ರಿ ಕಳ್ಳರ ಕೈಚಳಕಕ್ಕೆ ಮೈಸೂರಿಗರು ಕಂಗಾಲು ಮತ್ತೊಂದೆಡೆ ಜಯಲಕ್ಷ್ಮೀಪುರಂನಲ್ಲಿ ಸಂಜೆ ವೇಳೆ ರಸ್ತೆ ಬದಿ ಪಾರ್ಕ್ ಮಾಡಿದ್ದ ಬೈಕ್ ಕಳ್ಳತನವಾಗಿದೆ. ಬೈಕ್ ಕಳ್ಳತನದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಜಯಲಕ್ಷ್ಮೀಪುರಂ ಪೊಲೀಸ್ ಠಾಣೆ ಮತ್ತು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಓದಿ:5G ಗಾಗಿ ಲಿಂಕ್ ಕ್ಲಿಕ್ ಮಾಡಿದ್ರೆ ಖಾತೆಯಲ್ಲಿನ ಅಷ್ಟೂ ಹಣ ಮಂಗಮಾಯ.. ಹುಷಾರ್!