ಮೈಸೂರು:ವಿಧಾನ ಪರಿಷತ್ನ ನೂತನ ಸದಸ್ಯರಾಗಿ ನೇಮಕಗೊಂಡಿರುವ ಹೆಚ್.ವಿಶ್ವನಾಥ್ ಅವರಿಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು.
ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದ ವಿಶ್ವನಾಥ್ ಅವರು, ಎಲ್ಲರಿಗೂ ಸ್ವಾಗತ ಕೋರುವಾಗ ಕಾಂಗ್ರೆಸ್ ನಾಯಕರೇ ಎಂದು ಬಾಯ್ತಪ್ಪಿ ಹೇಳಿದರು. ಈ ವೇಳೆ, ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ತಬ್ಬಿಬ್ಬಾದ ಪ್ರಸಂಗವೂ ನಡೆಯಿತು. ಕೂಡಲೇ ತಪ್ಪಿನ ಅರಿವಾಗಿ ಕ್ಷಮಿಸಬೇಕು ಎಂದು ಹೇಳಿ ಮಾತು ಮುಂದುವರಿಸಿದರು.
ಗುಜರಾತ್ನಲ್ಲಿ ಅತ್ಯಂತ ಪ್ರಭಾವಿಯಾಗಿರುವ ಪಟೇಲ್ ಸಮುದಾಯವನ್ನು ಹಿಮ್ಮೆಟ್ಟಿಸಿ ನರೇಂದ್ರ ಮೋದಿ ಮುಖ್ಯಮಂತ್ರಿಯಾದರು. ಸತತ ಮೂರು ಬಾರಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದ ಅವರು, ನಂತರದ ದಿನಗಳಲ್ಲಿ ದೇಶದ ಪ್ರಧಾನಿಯಾದರು ಎಂದು ಮೋದಿ ಸಾಧನೆಯ ಗುಣಗಾನ ಮಾಡಿದರು.
ಇದೇ ವೇಳೆ ಅವರು ಕಾಂಗ್ರೆಸ್ನಲ್ಲಿರುವ ಗರ್ಭಗುಡಿ ಸಂಸ್ಕೃತಿಯನ್ನು ಟೀಕಿಸಿದರು. ನನ್ನನ್ನು ಕೆಲ ಸಾಹಿತಿಗಳು ಟೀಕಿಸಿದ್ದಾರೆ. ಆದರೆ ನಾನೇನು ಕಾಗಕ್ಕ ಗುಬ್ಬಕ್ಕನ ಕಥೆಗಳನ್ನು ಬರೆದಿಲ್ಲ. ನಾನು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ರಾಜಕಾರಣದ ಬಗ್ಗೆ ಪುಸ್ತಕಗಳನ್ನು ಬರೆದಿದ್ದೇನೆ. ನನ್ನ ಅನುಭವವನ್ನು ಗುರುತಿಸಿದ ಬಿಜೆಪಿ ನನಗೆ ಇದೀಗ ವಿಧಾನಪರಿಷತ್ ಸ್ಥಾನ ನೀಡಿದೆ ಎಂದು ತಮ್ಮ ಟೀಕಾಕಾರರಿಗೆ ತಿರುಗೇಟು ನೀಡಿದರು.