ಮೈಸೂರು:ಮೈಸೂರು-ಕುಶಾಲನಗರ ನಡುವಿನ ರೈಲು ಮಾರ್ಗದ ಕಾಮಗಾರಿಗೆ ಜಮೀನು ಸರ್ವೇ ಮಾಡಲು ಅಧಿಕಾರಿಗಳು ಬರಲಿದ್ದಾರೆ ಎಂಬ ವದಂತಿ ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಈ ಬಗ್ಗೆ ತಿಳಿದ ಚಿಕ್ಕ ಬಿಚ್ಚನಹಳ್ಳಿ ಗ್ರಾಮಸ್ಥರು ಸಂಸದ ಪ್ರತಾಪಸಿಂಹನ ವಿರುದ್ಧ ರೊಚ್ಚಿಗೆದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರ್ಕಾರ ಹಾಗೂ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ ಹುಣಸೂರು ತಾಲೂಕು ಚಿಕ್ಕ ಬಿಚ್ಚನಹಳ್ಳಿ ಗ್ರಾಮಸ್ಥರು, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರತಾಪ್ ಸಿಂಹ ಅವರು ಬೇರೆ ಕಡೆ ಹೋಗುತ್ತಿದ್ದ ರೈಲ್ವೆ ಮಾರ್ಗವನ್ನು ನಮ್ಮ ಜಮೀನು ಕಡೆ ತಿರುಗಿಸಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರು, ಉದ್ಯಮಿಗಳ ಪ್ರಭಾವದ ಒತ್ತಡಕ್ಕೆ ಮಣಿದು, ಮೈಸೂರು ಕುಶಾಲನಗರ ರೈಲು ಮಾರ್ಗವನ್ನು ಎರಡು ಸಲ ಬದಲಾವಣೆ ಮಾಡಿದ್ದಾರೆ. ಈಗ ನಮ್ಮ ಜಮೀನಿನ ಮೇಲೆ ಹಾದು ಹೋಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.