ಮೈಸೂರು:ನಕಲಿ ದಾಖಲೆ ಸೃಷ್ಟಿಸಿ, ಜಮೀನು ಮಾರಾಟ ಮಾಡಿದವರಿಗೆ ಹುಣಸೂರ ಸಿ ಜೆ ಮತ್ತು ಜೆಎಂಎಫ್ ಸಿ ಪ್ರಧಾನ ಹಿರಿಯ ನ್ಯಾಯಾಲಯವು, 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
2010 ಜನವರಿ 18 ರಂದು ಹುಣಸೂರು ತಾಲೂಕಿನ ಬಿ ಆರ್ ಕಾವಲು ಗ್ರಾಮದ ಸರ್ವೇ ನಂ.40ರಲ್ಲಿ 4 ಎಕರೆ ಜಮೀನಿನ ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ಕ್ರಯ ಮಾಡಿ ಮಾರಾಟ ಮಾಡಲಾಗಿತು. ಸುಳ್ಳು ದಾಖಲೆ ಸೃಷ್ಟಿಸಿ ಜಮೀನು ಮಾರಿ ವಂಚನೆ ಮಾಡಲಾಗಿದೆ ಎಂದು ನೀಡಿದ ದೂರನ್ನು ಅಂದಿನ ಹುಣಸೂರು ಪಟ್ಟಣ ಠಾಣೆಯ ಪಿಎಸ್‌ಐ ಬಿ ಆರ್ ಪ್ರದೀಪ್ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ನಂತರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದರು.
ಹುಣಸೂರು ಸಿ ಜೆ ಮತ್ತು ಜೆಎಂಎಫ್ ಸಿ ಪ್ರಧಾನ ಹಿರಿಯ ನ್ಯಾಯಾಲಯ ನ್ಯಾಯಾಧೀಶರು ವಾದ ಪ್ರತಿವಾದ ಆಲಿಸಿ, ಇಬ್ಬರು ಆರೋಪಿಗಳಿಗೆ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂ.ದಂಡ ವಿಧಿಸಿ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಅರ್ಚನ ಪ್ರಸಾದ್ ಅವರು ವಾದ ಮಂಡಿಸಿದ್ದರು.
ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಹಾಗೂ ತನಿಖೆ ಪೂರೈಸಿ, ಆರೋಪಿಗಳ ವಿರುದ್ಧ ದೋಷಾರೋಪಣ ಪತ್ರ ಸಲ್ಲಿಸಿದ್ದ ಆಗಿನ ಪಿಎಸ್ ಐ ಬಿ ಆರ್ ಪ್ರದೀಪ್ ಹಾಗೂ ತನಿಖಾ ಸಹಾಯಕ ಶಿವಕುಮಾರ್ ಅವರ ಕಾರ್ಯವನ್ನು ಮೈಸೂರು ಜಿಲ್ಲಾ ಎಸ್‌ಪಿ ಸೀಮಾ ಲಾಟ್ಕರ್ ಅವರು ಶ್ಲಾಘಿಸಿದ್ದಾರೆ.
ಇದನ್ನೂಓದಿ:ಅಕ್ರಮ ಡೀಸೆಲ್ ಸಾಗಣೆ ದಾಳಿ ಮಾಡಲು ಡಿವೈಎಸ್ಪಿ ಅದಕ್ಕಿಂತ ಮೇಲಾಧಿಕಾರಿಗಳಿರಬೇಕು: ಹೈಕೋರ್ಟ್