ಮೈಸೂರು:ಆ.07 ರಂದು ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳಲು ಮೊದಲ ಹಂತದ ಗಜಪಯಣದಲ್ಲಿ ಆಗಮಿಸಿದ ಲಕ್ಷ್ಮಿ ಎಂಬ ಆನೆ ಕಳೆದ ರಾತ್ರಿ ಆನೆ ಶಿಬಿರದಲ್ಲಿ ಗಂಡು ಮರಿಗೆ ಜನ್ಮ ನೀಡಿದೆ. ಇದು ಮಾವುತರು-ಕಾವಾಡಿಗಳು ಹಾಗೂ ರಾಜ ವಂಶಸ್ಥರಲ್ಲಿ ಸಂತಸ ಉಂಟುಮಾಡಿದೆ.
ಕಳೆದ 1 ತಿಂಗಳಿನಿಂದ ಸಾಮಾನ್ಯ ಆನೆಯಂತೆ ತಾಲೀಮಿನಲ್ಲಿ ಭಾಗವಹಿಸಿದ್ದ ಲಕ್ಷ್ಮಿ ಆನೆ ನಿನ್ನೆ ಮಧ್ಯಾಹ್ನ ಇದ್ದಕ್ಕಿದ್ದಂತೆ ಶಿಬಿರಲ್ಲಿ ತನ್ನ ವರ್ತನೆಯನ್ನು ಬದಲಾಯಿಸಿತ್ತು. ಇದನ್ನು ಗಮನಿಸಿದ ಮಾವುತರು ತಕ್ಷಣ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಮತ್ತು ವೈದ್ಯರು ಆನೆಯನ್ನು ಪರೀಕ್ಷೆ ಮಾಡಿದಾಗ ಆನೆ ತುಂಬು ಗರ್ಭಿಣಿ ಎಂದು ತಿಳಿದು ಬಂದಿದೆ. ಕೂಡಲೇ ಆನೆಯನ್ನು ಅರಮನೆ ಬಳಿಯ ಅಡುಗೆ ಮನೆಗೆ ಸ್ಥಳಾಂತರಿಸಿದರು. ಅಲ್ಲಿ ವೈದ್ಯರು ಮತ್ತು ಮಾವುತರ ಸಮ್ಮುಖದಲ್ಲಿ ಗಂಡು ಮರಿಗೆ ಜನ್ಮ ನೀಡಿದೆ.
ಅಚ್ಚರಿ ತಂದ ವಿಷಯ: ಸಾಮಾನ್ಯವಾಗಿ ನಾಡಹಬ್ಬ ದಸರಾದಲ್ಲಿ ಭಾಗವಹಿಸಲು ಆಗಮಿಸುವ ಗಜಪಡೆಯನ್ನು ವೈದ್ಯರು ಮತ್ತು ಅರಣ್ಯಾಧಿಕಾರಿಗಳು ಪರೀಕ್ಷೆ ಮಾಡಿರುತ್ತಾರೆ. ಆನೆ ಗರ್ಭಿಣಿಯಾದರೆ ದಸರಾಗೆ ಕರೆ ತರುವುದಿಲ್ಲ. ಆದರೆ ಸಾಮಾನ್ಯ ಆನೆಯಂತಿದ್ದ ಲಕ್ಷ್ಮಿ ಆನೆ ಗರ್ಭ ಧರಿಸಿರುವುದು ಮಾವುತ ಹಾಗೂ ಕಾವಾಡಿಗರಿಗೂ ತಿಳಿದಿರಲಿಲ್ಲ. ಹಾಗಾಗಿ ಈ ಆನೆಯನ್ನು ರಾಂಮಪುರ ಶಿಬಿರದಿಂದ ಕರೆತರಲಾಗಿತ್ತು.