ಕರ್ನಾಟಕ

karnataka

ETV Bharat / state

ಎರಡನೇ ಹಂತದ ಕುಶಾಲತೋಪು ಸಿಡಿಮದ್ದು ಯಶಸ್ವಿ: 5 ಆನೆಗಳು ಗೈರು - ರಂಪಾಟ ಮಾಡಿದ ಕುದುರೆ

ಮೈಸೂರು ನಗರದ ವಸ್ತು ಪ್ರದರ್ಶನ ಆವರಣದಲ್ಲಿ ದಸರಾ ಜಂಬೂ ಸವಾರಿ ಪೂರ್ವಭಾವಿಯಾಗಿ ಎರಡನೇ ಹಂತದ ಸಿಡಿಮದ್ದು ತಾಲೀಮನ್ನು ನಡೆಸಲಾಯಿತು.

kushalatopu practice
ಕುಶಾಲತೋಪು ಸಿಡಿಮದ್ದು

By ETV Bharat Karnataka Team

Published : Oct 14, 2023, 7:43 AM IST

Updated : Oct 14, 2023, 12:51 PM IST

ಕುಶಾಲತೋಪು ಸಿಡಿಮದ್ದು ತಾಲೀಮು

ಮೈಸೂರು : ದಿನದಿಂದ ದಿನಕ್ಕೆ ಮೈಸೂರು ದಸರಾ 2023 ರಂಗು ಪಡೆಯುತ್ತಿದ್ದು, ದಸರಾ ಗಜಪಡೆ ಹಾಗೂ ಜಂಬೂ ಸವಾರಿಯಲ್ಲಿ ಭಾಗವಹಿಸುವ ಅಶ್ವದಳದ ಎರಡನೇ ಹಂತದ ಕುಶಾಲತೋಪು ಸಿಡಿಮದ್ದು ತಾಲೀಮು ನಿನ್ನೆ ವಸ್ತು ಪ್ರದರ್ಶನದ ಆವರಣದಲ್ಲಿ ನಡೆಸಲಾಯಿತು. ಈ ವೇಳೆ, ಸಿಡಿಮದ್ದು ತಾಲೀಮಿಗೆ ಆಗಮಿಸಿದ ಅಶ್ವದಳದ ಕುದುರೆಯೊಂದು ಗಾಬರಿಗೊಂಡು ರಂಪಾಟ ಮಾಡಿದ ಘಟನೆ ನಡೆಯಿತು.

ಎರಡನೇ ಹಂತದ ಕುಶಾಲತೋಪು ತಾಲೀಮಿನಲ್ಲಿ ಮೊದಲ ತಂಡದಲ್ಲಿ ಅರಮನೆಗೆ ಆಗಮಿಸಿದ 9 ಗಜಪಡೆ ಹಾಗೂ 28 ಅಶ್ವದಳದ ಕುದುರೆಗಳು ಭಾಗವಹಿಸಿದ್ದವು. ತಾಲೀಮಿಗೆ ಆಗಮಿಸಿದ ಅಶ್ವದಳದ ಕುದುರೆಯೊಂದು ಸವಾರನ ನಿಯಂತ್ರಣ ತಪ್ಪಿ, ಗಾಬರಿಯಾಗಿ ರಂಪಾಟ ಮಾಡಿತು. ಇದೇ ಮೊದಲ ಬಾರಿಗೆ 5 ಆನೆಗಳ ಗೈರಿನೊಂದಿಗೆ ಎರಡನೇ ಸಿಡಿಮದ್ದು ತಾಲೀಮು ನಡೆಸಲಾಯಿತು.

ದಸರಾ ಜಂಬೂಸವಾರಿ ಪೂರ್ವಭಾವಿಯಾಗಿ ಎರಡನೇ ಹಂತದ ಸಿಡಿಮದ್ದು ತಾಲೀಮಿನಲ್ಲಿ ಮೊದಲ ಗಜಪಡೆಯ ತಂಡದ ಸದಸ್ಯರಾದ ಅಭಿಮನ್ಯು, ವರಲಕ್ಷ್ಮಿ, ವಿಜಯ, ಧನಂಜಯ, ಮಹೇಂದ್ರ, ಗೋಪಿ, ಭೀಮ, ಕಂಜನ್, ಅರ್ಜುನ ಆನೆಗಳು ಮಾತ್ರ ಪಾಲ್ಗೊಂಡಿದ್ದವು. ಉಳಿದಂತೆ ಎರಡನೇ ಹಂತದಲ್ಲಿ ಆಗಮಿಸಿದ ಹಿರಣ್ಯ, ಲಕ್ಷ್ಮಿ, ಪ್ರಶಾಂತ, ಸುಗ್ರೀವ ಹಾಗೂ ರೋಹಿತ್ ಆನೆಗಳು ಗೈರಾಗಿದ್ದವು. ಬಹುತೇಕ ಹೊಸ ಆನೆಗಳು ಗೈರಾಗಿದ್ದ ಹಿನ್ನೆಲೆಯಲ್ಲಿ ಉಳಿದ ಅನುಭವಿ ಆನೆಗಳು ಸಿಡಿಮದ್ದಿಗೆ ಹೆದರಲಿಲ್ಲ.

ಹೊರಟುಹೋದ ಎರಡು ಅಶ್ವಗಳು : ತಾಲೀಮಿಗೂ ಮುನ್ನವೇ ಎರಡು ಕುದುರೆಗಳು ಸಿಡಿಮದ್ದಿಗೂ ಮೊದಲೇ ಆನೆಗಳನ್ನು ಹತ್ತಿರದಿಂದ ಕಂಡು ಬೆದರಿದವು. ಇದರಿಂದಾಗಿ ಕಮಾಂಡ್​ಗಳು ಅವುಗಳನ್ನು ಕರೆದೊಯ್ದರು. ಅಂತೆಯೇ ಉಳಿದ ಅಶ್ವಗಳು ಬೆಚ್ಚಿದವಾದರೂ ಕಮಾಂಡ್​ಗಳು ಅವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ಇದೇ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ನಗರ ಪೋಲಿಸ್ ಕಮಿಷನರ್ ರಮೇಶ್ ಬಾನೋತ್. "ನಿನ್ನೆ ಮೈಸೂರು ನಗರದಲ್ಲಿ ಸೆಕ್ಷನ್ 144 ಜಾರಿ ಮಾಡಿದ್ದು, ಇದಕ್ಕೆ ಸಹಕರಿಸಿದ ಮೈಸೂರು ಜನತೆಗೆ ಕೃತಜ್ಞತೆ ಅರ್ಪಿಸಿದರು. ಬಳಿಕ, ಮಾತು ಮುಂದುವರೆಸಿ, ಎರಡನೇ ಹಂತದಲ್ಲಿ ಗಜಪಡೆ ಹಾಗೂ ಅಶ್ವದಳಕ್ಕೆ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಯಿತು. ಮೂರನೇ ಹಾಗೂ ಕೊನೆಯ ಹಂತದ ತಾಲೀಮನ್ನ 16 ನೇ ತಾರೀಖು ನಡೆಸಲಾಗುವುದು, ಜಂಬೂಸವಾರಿಯ ದಿನ ಶಬ್ದಕ್ಕೆ ಹೆದರದ ರೀತಿಯಲ್ಲಿ ತಯಾರಿ ನಡೆಸಲು ಕುಶಾಲತೋಪು ತಾಲೀಮು ನಡೆಸುತ್ತಿದ್ದೇವೆ ಎಂದು ವಿವರಿಸಿದರು.

ಇನ್ನು ಅರಣ್ಯ ಇಲಾಖೆ ಉಪನಿರ್ದೇಶಕ (ಡಿಸಿಎಫ್ ) ಸೌರವ್ ಕುಮಾರ್ ಮಾತನಾಡಿ, ಎಲ್ಲಾ ಆನೆಗಳು ಆರೋಗ್ಯವಾಗಿದ್ದು, ಗಜಪಯಣದ ದಿನ ಮೈಸೂರಿಗೆ ಆಗಮಿಸಿದ 9 ಆನೆಗಳನ್ನು ಕರೆತಂದು ಎರಡನೇ ಹಂತದ ತಾಲೀಮು ನಡೆಸಲಾಗಿದೆ. ಮೂರನೇ ತಾಲೀಮಿಗೆ ಉಳಿದ ಆನೆಗಳು ಬರಲಿದ್ದು, ಶೀಘ್ರದಲ್ಲೇ ಪಟ್ಟದ ಆನೆ ಹಾಗೂ ಶ್ರೀರಂಗಪಟ್ಟಣ ದಸರಾ ಆನೆಗಳನ್ನು ಅಂತಿಮಗೊಳಿಸಲಾಗುವುದು. ಜೊತೆಗೆ, ಅರಮನೆಯ ದಸರಾಗೆ ಪಟ್ಟದ ಆನೆಯನ್ನು ಈಗಾಗಲೇ ರಾಜಮಾತೆ ಪ್ರಮೋದಾ ದೇವಿ ಗುರುತಿಸಿದ್ದು, ಅವರು ಪಟ್ಟದ ಆನೆ ಯಾವುದು ಎಂಬುದನ್ನು ಖಚಿತಪಡಿಸಿದ ನಂತರ ತಿಳಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ :ಅರಮನೆಯಲ್ಲಿ ಶರನ್ನವರಾತ್ರಿ: ರಕ್ತ ಚಿಮ್ಮುವ 'ವಜ್ರಮುಷ್ಠಿ ಕಾಳಗ' ಹೇಗೆ ನಡೆಯುತ್ತೆ ಗೊತ್ತೇ?

Last Updated : Oct 14, 2023, 12:51 PM IST

ABOUT THE AUTHOR

...view details