ಕರ್ನಾಟಕ

karnataka

ETV Bharat / state

ಬಜೆಟ್​ನಲ್ಲಿ ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಡಬೇಕು: ಕುರುಬೂರು ಶಾಂತಕುಮಾರ್

ಬಜೆಟ್‌ನಲ್ಲಿ ರೈತರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಕುರುಬೂರು ಶಾಂತಕುಮಾರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

kuruburu shanthakumar
ಕುರುಬೂರು ಶಾಂತಕುಮಾರ್

By

Published : Feb 12, 2023, 12:44 PM IST

ಸರ್ಕಾರಕ್ಕೆ ಕುರುಬೂರು ಶಾಂತಕುಮಾರ್ ಮನವಿ

ಮೈಸೂರು: ತೆಲಂಗಾಣ ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೂ 5 ಲಕ್ಷ ರೂ ಜೀವ ವಿಮೆ ಪಾಲಿಸಿ ನೀಡಿದೆ. ಆಕಸ್ಮಿಕ ಸಾವು, ಅಪಘಾತ, ಆತ್ಮಹತ್ಯೆಗೆ ಒಳಗಾದ ಕುಟುಂಬಕ್ಕೆ ಇಷ್ಟು ಪರಿಹಾರ ಸಿಗುತ್ತದೆ. ಇದೇ ರೀತಿ ಕರ್ನಾಟಕದಲ್ಲೂ ಯೋಜನೆ ಜಾರಿಗೆ ತರಬೇಕು. ಬಜೆಟ್​ನಲ್ಲಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.

"ರೈತರು ಬೆಳೆದ ಎಲ್ಲಾ ಪೌಷ್ಟಿಕ ಆಹಾರ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರವೇ ಕಡ್ಡಾಯವಾಗಿ ಖರೀದಿಸುವಂತಹ ವ್ಯವಸ್ಥೆ ಜಾರಿಗೆ ಬರಬೇಕು. ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಖರೀದಿಸಿ, ಸರ್ಕಾರದ ಅಂಗಸಂಸ್ಥೆಗಳಾದ ಆಸ್ಪತ್ರೆ, ವಿದ್ಯಾರ್ಥಿ ನಿಲಯ, ಜೈಲುಗಳಿಗೆ ಪೂರೈಸುವ ವ್ಯವಸ್ಥೆ ಮಾಡಬೇಕು. ರೈತರಿಂದ ಖರೀದಿಸುವ ಮಿತಿಯನ್ನು ರದ್ದುಗೊಳಿಸಿ, ಪಂಜಾಬ್, ಹರಿಯಾಣ, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ಇರುವಂತೆ ಜಾರಿ ಮಾಡಬೇಕು".

"ಎಲ್ಲಾ ಕೃಷಿ ಉತ್ಪಾದನಾ ಬೆಳೆಗಳಿಗೆ ಬೆಳೆ ವಿಮೆ ಜಾರಿಯಾಗಬೇಕು. ಬೆಳೆ ವಿಮೆ ಪದ್ಧತಿಯ ಕೆಲವು ನೀತಿಗಳು ಬದಲಾಗಬೇಕು. ಕೃಷಿ ಸಾಲ ನೀತಿ ಬದಲಾಗಬೇಕು. ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬಡ್ಡಿ ರಹಿತ ಸಾಲ ನೀಡುವಂತೆ ಆಗಬೇಕು. ಎಲ್ಲಾ ರೈತರಿಗೂ ಪಹಣಿ ಪತ್ರ ಆಧರಿಸಿ ಕನಿಷ್ಠ 3 ಲಕ್ಷ ಆಧಾರರಹಿತ ಬಡ್ಡಿಇಲ್ಲದ ಸಾಲ ಕೊಡಿಸುವ ಯೋಜನೆ ಜಾರಿಯಾಗಬೇಕು. ಕೃಷಿ ವಿಶ್ವವಿದ್ಯಾಲಯಗಳು ಹೆಚ್ಚು ಹೆಚ್ಚು ಕೃಷಿ ಮೇಳಗಳನ್ನು ಆಯೋಜಿಸಬೇಕು. ರಾಷ್ಟ್ರೀಯ ವಿಶ್ವ ರೈತರ ದಿನ ಡಿಸೆಂಬರ್ 23 ರಂದು ದಿವಂಗತ ಎಂ ಡಿ.ಎನ್ ಹೆಸರಿನಲ್ಲಿ ರೈತರ ಹಬ್ಬದ ರೀತಿ ಆಚರಿಸಲು ಕ್ರಮ ಕೈಗೊಳ್ಳಬೇಕು".

ಇದನ್ನೂ ಓದಿ:ಬಜೆಟ್ 2023ರ ನಿರೀಕ್ಷೆ: ರೈತರ ಸಮಸ್ಯೆ ಬಗೆಹರಿಸುವಂತೆ ಕುರುಬೂರು ಶಾಂತಕುಮಾರ ಮನವಿ

"ಕಬ್ಬಿನ ಎಫ್​ಆರ್​ಪಿ ದರ ರೈತನ ಹೊಲದಲ್ಲಿನ ದರ ಎಂದು ಬದಲಾಗಬೇಕು. ಸಕ್ಕರೆ ಕಾರ್ಖಾನೆಗಳ ಹಾಗೂ ಕೂಲಿ ಕಾರ್ಮಿಕರ ಸಮಸ್ಯೆ ತಪ್ಪಿಸಲು ಎನ್ಆರ್‌ಇಜಿ ಯೋಜನೆಯ ಕಬ್ಬು ಕಟಾವು ಹಾಗೂ ಬಿತ್ತನೆಗೆ ಬಳಸಿಕೊಳ್ಳಲು ಯೋಜನೆಗೆ ಸೇರಿಸಬೇಕು. ಬಾಳೆ ಬೆಳೆಗೆ ಪ್ರೋತ್ಸಾಹ ಧನ ನೀಡುವ ರೀತಿ ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿ ತೋರಿಸುವ ಮಾನದಂಡ ಬದಲಾಗಬೇಕು. ಇಳುವರಿ ಮೋಸ ತಪ್ಪಿಸಲು ವೈಜ್ಞಾನಿಕ ಮಾನದಂಡ ಅಳವಡಿಸಬೇಕು".

"ಕೃಷಿ ಉತ್ಪನ್ನಗಳಿಗೆ ಎಪಿಎಂಸಿಯಲ್ಲಿ ಅಡಮಾನ ಸಾಲ ಯೋಜನೆ ಸದೃಢಗೊಳಿಸಬೇಕು. ರೈತರಿಗೆ ಅನುಕೂಲವಾಗುವ ಈ ಯೋಜನೆಗೆ ಹೆಚ್ಚು ಅನುದಾನ ಮೀಸಲಿಡಬೇಕು. ಕಬ್ಬಿನ ಎಥೆನಾಲ್ ಉತ್ಪಾದನಾ ಆದಾಯವನ್ನು ಕಬ್ಬು ದರ ನಿಗದಿಯಲ್ಲಿ ಪರಿಗಣಿಸಬೇಕು. ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಬೆಂಕಿ ಅನಾಹುತವಾಗಿ ಸುಟ್ಟು ಹೋದ ಕಬ್ಬಿಗೆ ಯಾವುದೇ ಮಾನದಂಡವಿಲ್ಲದೆ ಕಾರ್ಖಾನೆಗಳು ಕಬ್ಬಿನ ಹಣದಲ್ಲಿ ಶೇಕಡಾ 25ರಷ್ಟು ಕಟಾವು ಮಾಡುವುದನ್ನು ತಪ್ಪಿಸಬೇಕು. ಎಫ್​ಆರ್​ಪಿ ಪೂರ್ಣ ಹಣ ರೈತರಿಗೆ ಪಾವತಿ ಆಗಬೇಕು".

ಇದನ್ನೂ ಓದಿ:ಸರ್ಕಾರದಿಂದ ಹೆಚ್ಚುವರಿ ಎಫ್​ಆರ್​ಪಿ ದರದ ಭರವಸೆ: 39 ದಿನದ ಧರಣಿ ಕೈಬಿಟ್ಟ ಕಬ್ಬು ಬೆಳೆಗಾರರು

"ಕೃಷಿಗೆ ಬಳಸುವ ಕೀಟನಾಶಕ, ರಸಗೊಬ್ಬರ, ಹನಿ ನೀರಾವರಿ ಉಪಕರಣಗಳು ಟ್ರ್ಯಾಕ್ಟರ್ ಬಿಡಿ ಭಾಗಗಳ ಜಿಎಸ್​ಟಿ ತೆರಿಗೆ ರದ್ದುಗೊಳಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು. ಕಾಡಂಚಿನ ಪ್ರಾಣಿಗಳ ಹಾವಳಿಯಿಂದ ರೈತರ ಬೆಳೆಗಳು ನಾಶವಾಗುತ್ತಿರುವುದನ್ನು ತಪ್ಪಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಪರಿಹಾರ ಮನದಂಡ ಹೆಚ್ಚಳ ಮಾಡಬೇಕು. ಕೃಷಿ ಜಮೀನನ್ನು ಅಭಿವೃದ್ಧಿ ಯೋಜನೆಗಳಿಗೆ ರೈತರಿಂದ ವಶಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕು, ಅಗತ್ಯ ಸಂದರ್ಭದಲ್ಲಿ ರೈತರನ್ನು ಪಾಲುದಾರರನ್ನಾಗಿ ಮಾಡಬೇಕು" ಎಂದು ಶಾಂತಕುಮಾರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ABOUT THE AUTHOR

...view details