ಮೈಸೂರು: ಜಾತಿ ಸಮುದಾಯಗಳ ಓಲೈಕೆಗೆ ಹಣ ಮೀಸಲಿಡುವ ಮೂಲಕ, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಬೇಕಾದ ಯಾವುದೇ ಪೂರಕ ಯೋಜನೆಗಳನ್ನು ಕೈಗೆತ್ತಿಕೊಳ್ಳದೆ ನಿರ್ಲಕ್ಷಿಸಿದ್ದಾರೆ ಎಂದು ರಾಜ್ಯ ಬಜೆಟ್ ಬಗ್ಗೆ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಟೀಕಿಸಿದ್ದಾರೆ.
ಬಜೆಟ್ನಲ್ಲಿ ಕೃಷಿ ಕ್ಷೇತ್ರ ಸಂಪೂರ್ಣ ನಿರ್ಲಕ್ಷ್ಯ; ಕುರುಬೂರು ಶಾಂತಕುಮಾರ್ - ಕರ್ನಾಟಕ ಬಜೆಟ್ ಸುದ್ದಿ
ಬಜೆಟ್ನಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಬೇಕಾದ ಯಾವುದೇ ಪೂರಕ ಯೋಜನೆಗಳನ್ನು ಕೈಗೆತ್ತಿಕೊಳ್ಳದೆ ನಿರ್ಲಕ್ಷಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಹೊಸ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಖರೀದಿಗೆ ಆವರ್ತ ನಿಧಿ ನಿಗದಿಗೊಳಿಸಿದೆ. ಕೃಷಿ ಉತ್ಪನ್ನಗಳ ಅಡಮಾನ ಸಾಲಕ್ಕೆ ಕೇವಲ ಐದು ಕೋಟಿ ಮೀಸಲಾಗಿರಿಸಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ರಸಗೊಬ್ಬರ ಬೆಲೆ ಏರಿಕೆ, ಡೀಸೆಲ್ ಬೆಲೆ ಏರಿಕೆಗಳಿಂದ ಕೃಷಿ ಯಂತ್ರೋಪಕರಣಗಳ ಬಳಕೆಗೆ ಸಂಕಷ್ಟ ಅನುಭವಿಸಬೇಕಾಗಿದೆ. ಇದಕ್ಕೆ ಯಾವುದೇ ಸ್ಪಂದನೆ ನೀಡದೆ ಇರುವುದು, ಮುಂದಿನ ದಿನಗಳಲ್ಲಿ ಕೃಷಿ ಹಿನ್ನಡೆಗೆ ಕಾರಣವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೇಕೆದಾಟು ಯೋಜನೆಗೆ 9 ಸಾವಿರ ಕೋಟಿ ರೂ. ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಇಪ್ಪತ್ತೊಂದು ಸಾವಿರ ಕೋಟಿ ಮೀಸಲಿರಿಸುವುದನ್ನು ಕಾರ್ಯಗತಗೊಳಿಸಬೇಕು. ಮಹಿಳಾ ದಿನದ ಪ್ರಯುಕ್ತ ಮಹಿಳೆಯರ ಅಭಿವೃದ್ಧಿಗೆ ಬೇಕಾದ ಹಲವು ಯೋಜನೆಗಳು ಉತ್ತಮವಾಗಿವೆ. ಕಬ್ಬು ಬೆಳೆಗಾರರಿಗೆ ಬೇಕಾದ ಯಾವುದೇ ಯೋಜನೆಗಳು, ಮಂಡ್ಯದ ಮೈ ಷುಗರ್ಸ್ ಸಕ್ಕರೆ ಕಾರ್ಖಾನೆ, ಶ್ರೀರಾಮ ಸಕ್ಕರೆ ಕಾರ್ಖಾನೆ ಆರಂಭದ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.