ಮೈಸೂರು:ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ನಿಂದ ಹೆಸರು ಕೆಟ್ಟಿತು ಎಂದು ನನಗೆ ಅನಿಸುವುದಿಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಕಾಂಗ್ರೆಸ್ ಪರ ಬ್ಯಾಟಿಂಗ್ ಮಾಡಿದರು.
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಅವರು ಯಾವ ಅರ್ಥದಲ್ಲಿ ಈ ಮಾತು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಜೊತೆ ಕೈ ಜೋಡಿಸುವಾಗ ನಮ್ಮ ಯಾವ ಶಾಸಕರ ಅಭಿಪ್ರಾಯವನ್ನು ಪಕ್ಷ ಕೇಳಲಿಲ್ಲ. ಹೆಚ್.ಡಿ.ದೇವೇಗೌಡರು, ಕುಮಾರಸ್ವಾಮಿ ಸೇರಿಕೊಂಡು ಈ ತೀರ್ಮಾನ ಮಾಡಿದ್ದರು ಎಂದರು.
ಧರಂಸಿಂಗ್ ಅವರ ಜೊತೆ ಸಮ್ಮಿಶ್ರ ಸರ್ಕಾರ ಮಾಡುವಾಗ ನಮ್ಮ ಅಭಿಪ್ರಾಯ ಕೇಳಿದ್ದರು. ಆದರೆ ಈ ಬಾರಿ ಆ ರೀತಿ ಅಭಿಪ್ರಾಯ ಕೇಳಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್-ಕಾಂಗ್ರೆಸ್ ಸಚಿವರ ಜೊತೆ ಹೊಂದಾಣಿಕೆ ಇತ್ತು. ಕುಮಾರಸ್ವಾಮಿ ಅವರಿಗೆ ಆಗಿರೋ ಕಹಿ ಅನುಭವ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಜೊತೆ ಸರ್ಕಾರ ಮಾಡಿ ಕುಮಾರಸ್ವಾಮಿ ಹೆಸರು ಕೆಟ್ಟಿತು ಎಂದು ನನಗೆ ಅನ್ನಿಸುವುದಿಲ್ಲ ಎಂದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿ, ಅದು ಅವರ ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವಧಿ ಪೂರೈಸಲಿವೆ. ಸ್ಥಳೀಯ ಸಂಸ್ಥೆ ಚುನಾವಣೆಗಳು ಸರ್ಕಾರದ ಪರವಾಗಿ ಇರಲಿವೆ. ಯಾರು ಏನೇ ಮಾತನಾಡಿದರು ಈ ಫಲಿತಾಂಶ ಬದಲಾಯಿಸಲು ಸಾಧ್ಯವಿಲ್ಲ ಎಂದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸುಭದ್ರವಾಗಿವೆ. ಸರ್ಕಾರ ಅಲ್ಲಾಡುತ್ತೆ, ಬೀಳುತ್ತೆ ಎನ್ನುವುದು ರಾಜಕೀಯ ಅಪ್ರಬುದ್ಧತೆ ಆಗುತ್ತದೆ. ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಕೇಂದ್ರ-ರಾಜ್ಯದಲ್ಲಿ ಸದೃಢವಾಗಿದೆ. ಅವಧಿಗೂ ಮುನ್ನ ಬಿಜೆಪಿ ಸರ್ಕಾರ ಬೀಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.