ಮೈಸೂರು: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 1 ಲಕ್ಷ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡುವ ಗುರಿ ಇದೆ ಎಂದು ವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾಹಿತಿ ನೀಡಿದ್ದಾರೆ. ಬುಧವಾರ ವಿವಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, "2024-25ನೇ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆ ಜ.12ರಿಂದ ಮಾ.31ರವರೆಗೆ ನಡೆಯಲಿದೆ. ವಿವಿಯಲ್ಲಿ 64 ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳಿವೆ. ಈ ಪೈಕಿ 44 ಆಫ್ಲೈನ್, 10 ಆನ್‌ಲೈನ್ ಕೋರ್ಸ್‌ಗಳಾಗಿವೆ. ಹೊಸದಾಗಿ ಎಂಎಸ್‌ಡಬ್ಲೂ, ಎಂಸಿಎ ಕೋರ್ಸ್‌ಗಳು ಪ್ರಾರಂಭಗೊಂಡಿವೆ. ಇದರೊಂದಿಗೆ ಅರ್ಥ್‌ಸೈನ್ಸ್ ಪ್ರಾರಂಭಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲಿಸಲು ಯುಜಿಸಿ ತಂಡ ಜ.17ರಂದು ವಿವಿಗೆ ಆಗಮಿಸಲಿದೆ" ಎಂದರು.
"ರಾಜ್ಯದ ವಿವಿಧ ಕಾಲೇಜುಗಳಲ್ಲಿ ಸ್ಟಡಿ ಸೆಂಟರ್ ತೆರೆಯಲು ಉದ್ದೇಶಿಸಲಾಗಿದೆ. ಕೆಲವೊಂದು ಪ್ರಾದೇಶಿಕ ಕೇಂದ್ರಗಳು ಸ್ವಂತ ಕಟ್ಟಡ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ" ಎಂದು ತಿಳಿಸಿದರು.
"ಪಿಹೆಚ್‌ಡಿ ಕೋರ್ಸ್ ಪ್ರಾರಂಭಕ್ಕೆ ಸಂಬಂಧಿಸಿದಂತೆ ಒಂದೆರಡು ದಿನಗಳೊಳಗೆ ನೋಟಿಫಿಕೇಷನ್ ಹೊರಡಿಸಲಾಗುವುದು. 22 ಪ್ರಾಧ್ಯಾಪಕರಿಗೆ ಪಿಹೆಚ್‌ಡಿ ಮಾರ್ಗದರ್ಶನ ನೀಡುವ ಅನುಮತಿ ದೊರೆತಿದೆ. ಪ್ರತಿ ಪ್ರಾಧ್ಯಾಪಕರು 4ರಿಂದ 5 ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಒಟ್ಟು ನೂರು ವಿದ್ಯಾರ್ಥಿಗಳಿಗೆ ಪಿಹೆಚ್‌ಡಿ ಕೋರ್ಸ್‌ಗೆ ಅವಕಾಶ ಮಾಡಿಕೊಡಲಾಗುವುದು" ಎಂದು ಮಾಹಿತಿ ನೀಡಿದರು.
"ಆಸಕ್ತರಿಗೆ ವಿದೇಶಿ ಭಾಷೆಗಳ ಕಲಿಕೆಯ ಶಿಕ್ಷಣ ಒದಗಿಸಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮುಂದಾಗಿದೆ. ಈ ಸಂಬಂಧ ವಿಶ್ವವಿದ್ಯಾಲಯವು ದಿಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಿದೆ. ಜಾಗತಿಕ ಬೇಡಿಕೆಗೆ ಅನುಗುಣವಾಗಿ ಜರ್ಮನಿ, ಫ್ರೆಂಚ್, ಸ್ಪ್ಯಾನಿಷ್, ಅರೇಬಿಕ್ ಸೇರಿದಂತೆ ವಿವಿಧ ಭಾಷೆಗಳನ್ನು ದೂರ ಶಿಕ್ಷಣ ಹಾಗೂ ಆನ್‌ಲೈನ್ ಮೂಲಕ ಕಲಿಸುವ ಯೋಜನೆ ಇದೆ. ಇದಕ್ಕೆ ಬೇಕಾದ ನೆರವನ್ನು ಜೆಎನ್‌ಯು ಒದಗಿಸಲಿದೆ" ಎಂದರು.