ಮೈಸೂರು : ಸಾಹಿತಿಗಳು ಸಮಾಜದ ಎಚ್ಚರಿಕೆಯ ಗುರುತುಗಳು. ಅವರಿಗೆ ಇತ್ತೀಚೆಗೆ ಬೆದರಿಕೆ ಬರುತ್ತಿದ್ದು, ರಕ್ಷಣೆ ಕೊಡುತ್ತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ದೊಡ್ಡತನ. ಇದಕ್ಕಾಗಿ ಎಲ್ಲಾ ಸಾಹಿತಿಗಳ ಪರವಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ತಿಳಿಸಿದರು.
ಶುಕ್ರವಾರ ಮೈಸೂರಿನ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆ.ಎಸ್.ಭಗವಾನ್, ನಂತರ ಈಟಿವಿ ಭಾರತ್ ಜೊತೆ ಮಾತನಾಡುತ್ತಾ, ಕಳೆದ ದಿನಗಳಿಂದ ಸಾಹಿತಿಗಳಿಗೆ ಬೆದರಿಕೆ ಪತ್ರಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅವರಿಗೆ ರಕ್ಷಣೆ ಕೊಡುವ ನಿರ್ಧಾರವನ್ನು ಮುಖ್ಯಮಂತ್ರಿಗಳು ಪ್ರಕಟಿಸಿರುವುದು ಒಳ್ಳೆಯ ನಿರ್ಧಾರ ಎಂದರು.
ಮೈಸೂರು ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಕುವೆಂಪು ನಗರದ ಉದಯರವಿ ರಸ್ತೆಯ ಹೆಸರು ಬದಲಾವಣೆ ಮಾಡಲು ಹೊರಟಿರುವುದು ಸರಿಯಲ್ಲ. ಈಗಾಗಲೇ ಕುವೆಂಪು ನಗರ ಬಡಾವಣೆಗಳಿಗೆ 42 ವರ್ಷಗಳಿಂದ ಉದಯರವಿ ಹೆಸರಿದ್ದು, ಬೆಂಗಳೂರು, ಮೈಸೂರು ಸೇರಿದಂತೆ ಎಲ್ಲಾ ಕಡೆ ಪರಿಚಿತವಾಗಿದೆ. ಉದಯರವಿ ಪ್ರಕಾಶನ ಹೆಸರಿನಲ್ಲಿ ಹಲವಾರು ಪುಸ್ತಕಗಳೂ ಹೊರಬಂದಿವೆ. ಈ ಹಿನ್ನೆಲೆಯಲ್ಲಿ ಕುವೆಂಪು ಸ್ಮರಣೆಯಲ್ಲಿರುವ ಉದಯರವಿ ರಸ್ತೆಯ ಹೆಸರನ್ನು ಬದಲು ಮಾಡಬೇಡಿ. ಇಲ್ಲಿ ರಾಷ್ಟ್ರಕವಿ ಕುವೆಂಪು ಅವರ ತಪಸ್ಸಿನ ಕೇಂದ್ರ ಉದಯರವಿ ಮನೆಯಿದೆ. ಅದು ಮುಂದೊಂದು ದಿನ ರಾಷ್ಟ್ರೀಯ ನೆನಪಿನ ಕೇಂದ್ರವಾಗಬಹುದು. ಆದ್ದರಿಂದ ಪಾಲಿಕೆಯಲ್ಲಿ ಚರ್ಚೆಗೆ ಬಂದ ಉದಯರವಿ ರಸ್ತೆಯ ಹೆಸರನ್ನು ಬದಲು ಮಾಡಬೇಡಿ ಎಂದು ಮನವಿ ಮಾಡುತ್ತೇನೆ ಎಂದು ಭಗವಾನ್ ಹೇಳಿದರು.