ಮೈಸೂರು: ಹಣ ಬಿಡಿಸಲು ಎಟಿಎಂ ಕೇಂದ್ರಕ್ಕೆ ಬರುತ್ತಿದ್ದ ವಯಸ್ಸಾದವರು ಹಾಗೂ ಎಟಿಎಂ ಬಳಕೆ ತಿಳಿಯದವರಿಗೆ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ ಖದೀಮನನ್ನು ಕೆ.ಆರ್.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಎಸ್ಪಿ ಆರ್.ಚೇತನ್, ಎಟಿಎಂ ಕೇಂದ್ರಕ್ಕೆ ಬರುತ್ತಿದ್ದ ಜನರಿಗೆ ಸಹಾಯ ಮಾಡುವ ನೆಪದಲ್ಲಿ ಅವರನ್ನ ನಂಬಿಸಿ, ಅವರಿಗೆ ಬೇರೆ ಕಾರ್ಡ್ ಕೊಟ್ಟು ವಂಚಿಸುತ್ತಿದ್ದ ಮೈಸೂರಿನ 30 ವರ್ಷದ ವ್ಯಕ್ತಿಯನ್ನ ಬಂಧಿಸಲಾಗಿದೆ. ಈತನಿಂದ 7 ನಕಲಿ ಎಟಿಎಂ ಕಾರ್ಡ್, 12 ಸಾವಿರ ನಗದು, 3 ಗ್ರಾಂ ಚಿನ್ನ, ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
2022ರ ಫೆ.2ರಂದು ಸುನಂದಬಾಯಿ ಹಾಗೂ ಮೇ 4ರಂದು ತಿಮ್ಮಶೆಟ್ಟಿ ಎಂಬುವರಿಗೆ ಕೆ.ಆರ್.ನಗರ ಪಟ್ಟಣದ ಕರ್ನಾಟಕ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ನನ್ನ ಎಟಿಎಂ ಕಾರ್ಡ್ ಕೆಲಸ ನಿರ್ವಹಿಸುತ್ತಿಲ್ಲವೆಂದು ನೆಪ ಹೇಳಿ, ಇಬ್ಬರ ಎಟಿಎಂ ಪಡೆದು ನಕಲಿ ಕಾರ್ಡ್ ನೀಡಿ ಹಣ ಡ್ರಾ ಮಾಡಿದ್ದಾನೆ. ವಂಚನೆಗೊಳಗಾದ ಇವರಿಬ್ಬರೂ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.