ಮೈಸೂರು:ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊರೊನಾ ಹೆಸರಿನಲ್ಲಿ ಲೂಟಿ ಹೊಡೆಯುತ್ತಿವೆ. ಇವು ಲೂಟಿ ಸರ್ಕಾರಗಳು ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ. ಪುಷ್ಪಾ ಅಮರ್ನಾಥ್ ಆರೋಪಿಸಿದರು.
ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಪುಷ್ಪಾ ಅಮರ್ ನಾಥ್ ಮಾಧ್ಯಮಗೋಷ್ಟಿ ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಜನ ಬಹಳ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಬೇರೆ ದೇಶಗಳಿಗೆ ಉಚಿತವಾಗಿ ಲಸಿಕೆ ನೀಡಿದ್ದಾರೆ. ಆದರೆ ನಮ್ಮ ದೇಶದಲ್ಲಿ ಒಂದು ಲಸಿಕೆಗೆ 300 ರಿಂದ 600 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಲಸಿಕೆ ಹಂಚಿಕೆಯಲ್ಲಿ ಕಿಕ್ ಬ್ಯಾಕ್ ಪಡೆದಿರಬಹುದು ಎನಿಸುತ್ತೆ ಎಂದು ಅನುಮಾನ ವ್ಯಕ್ತಪಡಿಸಿದರು.
ಮೋದಿ ಭಕ್ತರು ಅಥವಾ ಬಿಜೆಪಿ ಭಕ್ತರು ದುಡ್ಡು ಕೊಟ್ಟು ಲಸಿಕೆ ಪಡೆಯಲಿ. ಆದರೆ ಬಡವರಿಗೆ ಉಚಿತವಾಗಿ ಲಸಿಕೆ ನೀಡಲಿ. ಕೊರೊನಾ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತಾಗಿದೆ. ಎರಡನೇ ಅಲೆ ಬಗ್ಗೆ ತಜ್ಞರು ವರ್ಷದ ಹಿಂದೆಯೇ ಎಚ್ಚರಿಕೆ ಕೊಟ್ಟಿದ್ದರು. ಆದರೆ, ಕೇಂದ್ರ ಸರ್ಕಾರ ಕೇವಲ ಚುನಾವಣೆಯಲ್ಲಿ ಬ್ಯುಸಿಯಾಗುವ ಮೂಲಕ ಮತ್ತೊಮ್ಮೆ ಸಂಕಷ್ಟ ಉದ್ಭವವಾಗಲು ಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಓದಿ : ಡಾ.ರಾಜ್ ನೆನಪು : ಗಡಿ ಜಿಲ್ಲೆಯ ಅಭಿಮಾನಿಗೆ ಮಂತ್ರಾಲಯದ ದಾರಿ ತೋರಿದ್ದ ಅಣ್ಣಾವ್ರು
ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಲು ಪ್ರಧಾನಮಂತ್ರಿ, ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರೇ ಕಾರಣ. ಇವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದರು. ನಮ್ಮ ಜನ ಕೊರೊನಾದಿಂದ ಸಾಯುವುದಕ್ಕಿಂತ ಹಸಿವಿನಿಂದ ಸಾಯುವ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ಮಹಿಳೆವೋರ್ವಳು ತಾಳಿ ಮಾರಿ ಗಂಡನ ಶವ ಸಂಸ್ಕಾರ ಮಾಡಿದ ದೃಶ್ಯ ನೋಡಿದರೆ ಕಣ್ಣೀರು ಬರುತ್ತದೆ. ಕೊರೊನಾ ಹೆಚ್ಚಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಕಾರಣವೆಂದು ಪುಷ್ಪಾ ಅಮರ್ನಾಥ್ ದೂರಿದರು.