ಮೈಸೂರು: ಬಿಎಸ್ವೈ ಪುತ್ರ ವಿಜಯೇಂದ್ರ ರಾಜ್ಯದಲ್ಲಿ ತಮ್ಮದೇ ಆದ ಪರ್ಯಾಯ ಸರ್ಕಾರ ನಡೆಸುತ್ತಿದ್ದಾರೆ ಎಂದು ದೂರಿ ಬಿಜೆಪಿಯ 7 ಶಾಸಕರು ಹೈಕಮಾಂಡ್ಗೆ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಬಿಡುಗಡೆ ಮಾಡಿದ್ದಾರೆ.
ಹೈಕಮಾಂಡ್ಗೆ ಬಿಜೆಪಿಯ 7 ಶಾಸಕರು ಬೆರೆದಿರುವ ದೂರಿನ ಪತ್ರ ಬಿಡುಗಡೆ ಮಾಡಿದ ಕೆಪಿಸಿಸಿ ವಕ್ತಾರ - KPCC spokesperson Release complaint letter
ಬಿಜೆಪಿ ಹೈಕಮಾಂಡ್ಗೆ 7 ಶಾಸಕರು ಬರೆದಿದ್ದಾರೆ ಎನ್ನಲಾದ ದೂರಿನ ಪತ್ರವನ್ನು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಇಂದು ಮೈಸೂರಿನಲ್ಲಿ ಬಿಡುಗಡೆ ಮಾಡಿದರು.
ಇಂದು ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಪತ್ರ ಬಿಡುಗಡೆ ಮಾಡಿದ ಅವರು, ಬಿಜೆಪಿಯ ಹೈಕಮಾಂಡ್ಗೆ ಬಿಜೆಪಿಯ 7 ಶಾಸಕರು ಬರೆದ ಪತ್ರದಲ್ಲಿ ಸಿಎಂ ಪುತ್ರ ವಿಜಯೇಂದ್ರ ಪ್ರತಿಯೊಂದು ಇಲಾಖೆಗೂ ಒಬ್ಬೊಬ್ಬರನ್ನು ನೇಮಿಸಿಕೊಂಡು ಆಡಳಿತ ನಡೆಸುತ್ತಿದ್ದಾರೆ. ಇದರ ಬಗ್ಗೆ ಗಮನಿಸಬೇಕೆಂದು ಹೈಕಮಾಂಡ್ಗೆ ಬಿಜೆಪಿ ಶಾಸಕರು ಪತ್ರ ಬರೆದಿದ್ದಾರೆ. ಅಲ್ಲದೆ ವಿಜಯೇಂದ್ರ ಅವರು ಒಂದು ವರ್ಷದಲ್ಲಿ 5,000 ಕೋಟಿ ರೂ. ಹಣವನ್ನು ಸಂಗ್ರಹಿಸಿದ್ದಾರೆ ಎಂಬ ದೂರಿದೆ. ಅದರ ಬಗ್ಗೆ ತನಿಖೆಯಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ಪಕ್ಷ ಎಲ್ಲಾ ರೀತಿಯ ದಾಖಲಾತಿಗಳನ್ನು ಸಂಗ್ರಹಿಸಿದ್ದು, ಸೆಪ್ಟೆಂಬರ್ 2 ಅಥವಾ 3ನೇ ವಾರ ವಿಜಯೇಂದ್ರ ನಡೆಸಿರುವ ಭ್ರಷ್ಟಾಚಾರದ ಬಗ್ಗೆ ದೆಹಲಿಯಲ್ಲಿ ದಾಖಲಾತಿಗಳನ್ನು ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದರು.