ಮೈಸೂರು :ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿಸಿದ್ದು ಬಿಜೆಪಿಯವರೇ.. ಈ ಬಗ್ಗೆ ಪೊಲೀಸರು ತನಿಖೆ ಮಾಡಿ ಹೆಸರನ್ನು ಬಹಿರಂಗಪಡಿಸಲಿ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಸವಾಲು ಹಾಕಿದ್ದಾರೆ.
ಇಂದು ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಅವರು ಮಾತನಾಡಿದರು. ಬೆಂಗಳೂರಿನಲ್ಲಿ ಬ್ಲಾಕ್ ದಂಧೆ ಮಾಡುತ್ತಿದ್ದವನು ಸತೀಶ್ ರೆಡ್ಡಿ. ಈ ಪ್ರಕರಣವನ್ನು ಬಯಲು ಮಾಡಿದ್ದು ಬಿಜೆಪಿಯವರೇ.. ಆ ನಂತರ ನಾಟಕ ಮಾಡಿದ್ದರು. ಅದೇ ರೀತಿ ಶಾಸಕರ ಕಾರಿಗೆ ಬೆಂಕಿ ಹಚ್ಚಿಸಿದವರು ಬಿಜೆಪಿಯವರೇ.. ಈಗ ಬೆಂಕಿ ಹಚ್ಚಿದವರು ಯಾರು ಎಂದು ಪೊಲೀಸರು ಹೆಸರನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಸಿ ಟಿ ರವಿ ಕಾಂಗ್ರೆಸ್ ಬಗ್ಗೆ ಮಾಡುತ್ತಿರುವ ಆರೋಪ ಸರಿಯಲ್ಲ. ಆತನೇ ಒಬ್ಬ ಕೊಲೆಗಡುಕ. 2019ರಲ್ಲಿ ಕುಣಿಗಲ್ ಹತ್ತಿರ ಮದ್ಯಸೇವನೆ ಮಾಡಿ ಕಾರು ಚಲಾಯಿಸಿ ಇಬ್ಬರ ಸಾವಿಗೆ ಕಾರಣನಾಗಿದ್ದ. ಇವನು ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುತ್ತಾನೆ. ಇದೇ ರೀತಿ ಮಾತನಾಡಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಮೇಕೆದಾಟು ಯೋಜನೆಯಲ್ಲಿ ಕರ್ನಾಟಕಕ್ಕೆ ಮೋಸವಾಗುತ್ತಿದ್ದರೂ, ಮೊದಲು ನಾವು ಭಾರತೀಯರು. ನಂತರ ಕನ್ನಡಿಗರು ಎಂದು ಸಿ ಟಿ ರವಿ ಹೇಳುತ್ತಿರುವುದಕ್ಕೆ ನಾಚಿಕೆಯಾಗಬೇಕು ಎಂದರು. ಕಾಂಗ್ರೆಸ್ ಬಗ್ಗೆ ಸಚಿವ ಕೆ ಎಸ್ ಈಶ್ವರಪ್ಪ ಅವಾಚ್ಯ ಶಬ್ಧಗಳ ಬಳಕೆ ಕುರಿತು ಅವರು ಪ್ರತಿಕ್ರಿಯಿಸಿದರು. ಬಿಜೆಪಿಯ ಮೇಲಿನ ಕೋಪವನ್ನು ಕಾಂಗ್ರೆಸ್ ಮೇಲೆ ತೋರುತ್ತಿದ್ದಾರೆ. ಅವರಿಗೆ ಯಾವುದೇ ಸಂಸ್ಕೃತಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.