ಮೈಸೂರು: ಸಂಸದಪ್ರತಾಪ್ ಸಿಂಹ ಅವರು ದಿನ ನಿತ್ಯ ಹಿಟ್ ಅಂಡ್ ರನ್ ಹೇಳಿಕೆ ಕೊಟ್ಟು ಓಡಿಹೋಗುವ ಡೋಂಗಿ ರಾಜಕಾರಣಿ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು. ನಗರದ ಜಲದರ್ಶಿನಿ ಅತಿಥಿ ಗೃಹದ ಆವರಣದಲ್ಲಿರುವ ಸಂಸದ ಪ್ರತಾಪ್ ಸಿಂಹ ಕಚೇರಿಯ ಬಳಿ ಮೈಸೂರಿನ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮೈಸೂರು ಜಿಲ್ಲೆಗೆ ಸಿದ್ದರಾಮಯ್ಯ ಕೊಡುಗೆ ಏನೂ ಇಲ್ಲ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಸಿದ್ದರಾಮಯ್ಯ ಅವರ ಕೊಡುಗೆ ಏನು ಎಂಬ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿ ಬಳಿಕ ಮಾತನಾಡಿದರು.
ಪ್ರತಾಪ್ ಸಿಂಹ ಮಾಧ್ಯಮಗಳ ಮುಂದೆ ಮಾತ್ರ ಪೌರುಷ ತೋರಿಸುತ್ತಾರೆ. ನಾನು ಇಂದು ದಾಖಲೆಗಳನ್ನು ತೆಗೆದುಕೊಂಡು ಬಂದಿದ್ದೇನೆ. 2013 ರಿಂದ 2018ರ ವರೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮೈಸೂರು ನಗರಕ್ಕೆ ಮತ್ತು ಮೈಸೂರು ನಗರ ವ್ಯಾಪ್ತಿಗೆ ಬರುವ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಅವರು ಕೊಟ್ಟಿರುವ ಹಣ 3,800 ಕೋಟಿ. ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯ ವರೆಗೆ ಮೈಸೂರು ನಗರದ ಅಭಿವೃದ್ಧಿಗೆ ಇಷ್ಟು ದೊಡ್ಡ ಪ್ರಮಾಣ ಅನುದಾನ ಕೊಟ್ಟಂತಹ ಉದಾಹರಣೆಗಳೇ ಇಲ್ಲ. ಕಳೆದ ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಬಿಜೆಪಿ 100 ಕೋಟಿ ಅನುದಾನವನ್ನು ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.
ಹಿಂದೆ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಮೈಸೂರು ಜಿಲ್ಲೆಗೆ 22,000 ಕೋಟಿ ರೂಪಾಯಿ ಕೊಟ್ಟಿದ್ದಾರೆ. ಇದಕ್ಕೆ ದಾಖಲೆಗಳಾಗಿವೆ. ಪ್ರತಾಪ್ ಸಿಂಹ ಅವರು ಕಳೆದ ಒಂಬತ್ತು ವರ್ಷಗಳಿಂದ ಮೈಸೂರು ಜಿಲ್ಲೆಯ ಸಂಸದರಾಗಿದ್ದಾರೆ. ಅವರೇ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾರೆ. ಅವರ ವಿಶ್ವಗುರುವೇ ಪ್ರಧಾನಿ ಮಂತ್ರಿಯಾಗಿದ್ದಾರೆ. ಚುನಾವಣೆ ಸಮಯದಲ್ಲಿ ಮೈಸೂರಿಗೆ ಬಂದುಹೋಗುವ ಪ್ರಧಾನಿ ಮಂತ್ರಿಗಳು, ಮೈಸೂರನ್ನು ಸ್ವಿಡ್ಜರ್ಲ್ಯಾಂಡ್ ಮಾಡುತ್ತೇವೆ, ಪ್ಯಾರಿಸ್ ಮಾಡುತ್ತೇವೆ ಎಂದು ಹೇಳಿಕೆ ಕೊಟ್ಟು ಹೋಗುತ್ತಾರೆ. ಮೈಸೂರಿಗೆ ಇಲ್ಲಿಯ ವರೆಗೂ ಒಂದು ಪೈಸೆ ಕೊಟ್ಟಿದ್ದರೆ ತೋರಿಸಿ? ಎಂದು ಪ್ರಶ್ನಿಸಿದರು.