ಮೈಸೂರು: ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಂ ಆಗಿ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ಗೆ ಗೆಲ್ಲುವ ಶಕ್ತಿಯಿಲ್ಲ. ಜೆಡಿಎಸ್ ಬಳಿ ಕೇವಲ 32 ಮತಗಳಿವೆ. ಗೆಲುವಿಗೆ ಅಗತ್ಯ ಸಂಖ್ಯಾಬಲ ಇಲ್ಲದಿದ್ದರೂ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಯನ್ನು ಸೋಲಿಸಲು ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಈ ಮೂಲಕ ಜೆಡಿಎಸ್ ಅಲ್ಪಸಂಖ್ಯಾತರ ವಿರೋಧಿ ಎಂಬುದು ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್ಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ದರೆ, ಕುಪ್ಪೇಂದ್ರ ರೆಡ್ಡಿ ಬದಲು ಸಿಎಂ ಇಬ್ರಾಹಿಂಗೆ ಟಿಕೆಟ್ ನೀಡಬಹುದಿತ್ತು. ಆದರೆ, ಅವರಿಗೆ ಅಲ್ಪಸಂಖ್ಯಾತರ ಮೇಲೆ ಕಾಳಜಿ ಇಲ್ಲ. ಹೆಚ್. ಡಿ. ದೇವೇಗೌಡರು ರಾಜ್ಯಸಭಾ ಸದಸ್ಯರಾಗಲು ಕಾಂಗ್ರೆಸ್ ಕೊಡುಗೆ ಕಾರಣವಾಗಿದೆ. ಹಾಗಾಗಿ, ಕೂಡಲೇ ಜೆಡಿಎಸ್ ಅಭ್ಯರ್ಥಿಯನ್ನು ಹಿಂಪಡೆದು ಅಲ್ಪಸಂಖ್ಯಾತ ಸಮುದಾಯದ ಮನ್ಸೂರ್ ಅಲಿ ಖಾನ್ ಗೆಲುವಿಗೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೂ ಕಾಂಗ್ರೆಸ್ ನ ಎರಡನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಗೆಲುವು ಸಾಧಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದಕ್ಕೀಡಾಗಿರುವ ವಿಚಾರವಾಗಿ ಮಾತನಾಡಿ, ರೋಹಿತ್ ಚಕ್ರತೀರ್ಥ ತನ್ನನ್ನು ತಾನು ಚಕ್ರವರ್ತಿ ಅಂದುಕೊಂಡಿದ್ದಾರೆ. ಒಕ್ಕಲಿಗರು ಏನು ಬಾಯಿಗೆ ಕಡುಬು ಇಟ್ಟುಕೊಂಡಿದ್ದಿರಾ?. ಒಕ್ಕಲಿಗರ ಸಂಘ ಈಗ ಎಲ್ಲಿದೆ?. ಚುನಾವಣಾ ಸಂದರ್ಭದಲ್ಲಿ ಮಾತ್ರ ನೀವು ಆ್ಯಕ್ಟಿವ್ ಆಗ್ತಿರಾ. ಚುಂಚನಗಿರಿ ಶ್ರೀಗಳೇ ನಿಮ್ಮ ಒಕ್ಕಲಿಗ ಸಂಘ ಎಲ್ಲಿದೆ?. ಕುವೆಂಪು ಅವರಿಗೆ ಅವಮಾನ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.