ಮೈಸೂರು: 'ಟಿಪ್ಪು ನಿಜಕನಸುಗಳು' ನಾಟಕ ಪ್ರದರ್ಶನದ ಬಳಿಕ, ನಿಜಕನಸುಗಳು ಟೈಟಲ್ಗಳ ಮುಂದೆ ಅನೇಕ ಹೆಸರುಗಳು ಸೇರ್ಪಡೆಯಾಗುತ್ತಿದೆ. ಹೌದು, ಈ ಸಂಬಂಧ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಅವರು ಕಾಂಗ್ರೆಸ್ ಕಚೇರಿಯಲ್ಲಿ 'ಬಿಜೆಪಿಯ ನಿಜಕನಸುಗಳು' ಎಂಬ ಭಿತ್ತಿಪತ್ರ ಬಿಡುಗಡೆ ಮಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ರಾಜ್ಯ ಸರ್ಕಾರ ಶೇ. 40 ಕಮಿಷನ್ ಹಣಕ್ಕಾಗಿ, ರಾಜ್ಯವನ್ನು ಹಾಳು ಮಾಡುತ್ತಿದೆ. ಮೀಸಲಾತಿ ಹೆಚ್ಚಳ ಹೆಸರಿನಲ್ಲಿ ಸಮುದಾಯಗಳು ಕಿತ್ತಾಡುವಂತೆ ಮಾಡುತ್ತಿದ್ದಾರೆ. ಪಂಚಮಸಾಲಿ ಲಿಂಗಾಯತ, ಒಗ್ಗಲಿಗ ಎಸ್ಸಿ ಎಸ್ಟಿ ಇರಬಹುದು. ಎಲ್ಲರ ವಿಷಯದಲ್ಲೂ ಮೂಗಿಗೆ ತುಪ್ಪ ಸವರುವಂತಹ ಕೆಲಸ ಮಾಡುತ್ತಿದ್ದಾರೆ. ಎಸ್.ಸಿ, ಎಸ್ಟಿಗಳ ಮೇಲಿನ ದೌರ್ಜನ್ಯ ಶೇ. 26ಕ್ಕೆ ಏರಿಕೆಯಾಗಿದೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಬಿಜೆಪಿ ವಿರುದ್ಧ ಮತ ಹಾಕುವವರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವುದು, ಇವೇ ಬಿಜೆಪಿ ನಿಜಕನಸುಗಳು ಎಂದು ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಪಿಎಸ್ಐ, ಕೆಪಿಟಿಸಿಎಲ್ ಸೇರಿ ಸಹಾಯಕ ಇಂಜಿನಿಯರಿಂಗ್ ಹೀಗೆ ಪ್ರತಿ ಸರ್ಕಾರಿ ಹುದ್ದೆಗೆ 40 ಲಕ್ಷ ರೂ. ದಿಂದ 1 ಕೋಟಿ ವರೆಗೆ ಹರಾಜು ಹಾಕಲಾಗುತ್ತಿದೆ. ರೈತರು ಆತ್ಮಹತ್ಯೆ ಪ್ರಕರಣದಲ್ಲಿ ರಾಜ್ಯ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಬಿಜೆಪಿಯಲ್ಲಿ ಪಿಂಪ್ಗಳು ಹೆಚ್ಚಾಗುತ್ತಿದ್ದಾರೆ. ಇದನ್ನು ನಾವು ಹೇಳುತ್ತಿಲ್ಲ. ಬಿಜೆಪಿಯಲ್ಲಿರುವ ಸಚಿವರು, ಮಂತ್ರಿಗಳೇ ಹೇಳಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಹಾಗೂ ಅವರ ಕುಟುಂಬದವರನ್ನು ಸಂಪೂರ್ಣವಾಗಿ ಬದಿಗೆ ತಳ್ಳಿ ಹೊಸದಾಗಿ ಬಿಜೆಪಿ ಪಕ್ಷವನ್ನು ಕಟ್ಟುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿದೆ. ಹೀಗೆ ಹಲವು ವಿಷಯಗಳ ಬಗ್ಗೆ ಬಿಜೆಪಿ ವಿರುದ್ಧ ಟೀಕಿಸಿದರು.