ಮೈಸೂರು: ಕೆಎಸ್ಆರ್ಟಿಸಿಯನ್ನು ಖಾಸಗೀಕರಣ ಮಾಡಲು ರಾಜ್ಯ ಸರ್ಕಾರ ಹುನ್ನಾರ ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾರಿಗೆ ನೌಕರರ ಸಮಸ್ಯೆ ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಂಧಾನಕ್ಕೆ ಬರಲೇಬೇಡಿ ಎಂದು ಮುಖ್ಯ ಅಧಿಕಾರಿಗಳಿಂದ ಮುಖ್ಯಮಂತ್ರಿಗಳು ಹೇಳಿಸುತ್ತಾರೆ. ಕೆಎಸ್ಆರ್ಟಿಸಿಯನ್ನು ಸಂಪೂರ್ಣ ಖಾಸಗಿಮಯ ಮಾಡಲು ನಡೆಯುತ್ತಿರುವ ಹುನ್ನಾರ ಇದು ಎಂದು ಕಿಡಿಕಾರಿದರು.
ಕೋಡಿಹಳ್ಳಿ ಚಂದ್ರಶೇಖರ್ ನಾಯಕತ್ವವಹಿಸಿರೋದರಿಂದ ಅವರನ್ನ ಸಂಧಾನಕ್ಕೆ ಕರೆಯುತ್ತಿಲ್ಲ. ಖಾಸಗಿ ಬಸ್ ನೌಕರರನ್ನ ಸರ್ಕಾರಿ ನಿಲ್ದಾಣಕ್ಕೆ ಬಿಟ್ಟು ಕೆಲಸ ನಿರ್ವಹಿಸುವಂತೆ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಖಾಸಗಿಯವರನ್ನ ಒಳಗೆ ಬಿಟ್ಟು ಕೆಲಸ ನಿರ್ವಹಿಸುತ್ತಿದ್ದೀರಿ. ಟ್ರೈನಿಗಳನ್ನ ಕರೆತಂದು ವಾಹನ ಚಾಲನೆ ಮಾಡಿಸುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಚುನಾವಣೆಗಳ ಸಂದರ್ಭದಲ್ಲಿ ಆಶ್ವಾಸನೆ ನೀಡಿ ಮತ್ತೆ ಬದಲಾಗುತ್ತೀರಿ. ಹೆಚ್ಚು ಹಣ ವಸೂಲಿ ಮಾಡುತ್ತಿರುವುದಕ್ಕೆ ಎಲ್ಲಿ ಕಡಿವಾಣ ಹಾಕಿದ್ದೀರಿ? ಇದು ಖಾಸಗೀಕರಣ ಮಾಡಲು ಮೊದಲ ಹೆಜ್ಜೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಪ ಚುನಾವಣೆಗಾಗಿ ಅಬಕಾರಿ ಇಲಾಖೆಯಿಂದ ಹಫ್ತಾ ವಸೂಲಿ: 40 ಅಬಕಾರಿ ಉಪ ನಿರೀಕ್ಷಕರಿಂದ ಹಫ್ತಾ ವಸೂಲಿ ಮಾಡಲಾಗುತ್ತಿದೆ. ಪ್ರತಿ ಡೆಪ್ಯೂಟಿ ನಿರೀಕ್ಷಕರಿಂದ ತಲಾ 50 ಲಕ್ಷ ಹಪ್ತಾ ವಸೂಲಿ ಮಾಡಲಾಗುತ್ತಿದೆ. ಎಂಟು ಇಲಾಖೆಗಳಿಂದ 500 ಕೋಟಿ ಹಪ್ತಾ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಅಬಕಾರಿ ಇಲಾಖೆ ಒಂದರಲ್ಲೇ 45 ಕೋಟಿ ವಸೂಲಿಯಾಗಿದೆ. ಈ ಹಣ ಕೊಟ್ಟು ಬಂದ ಅಧಿಕಾರಿಯೇ ನನ್ನ ಬಳಿ ಹೇಳಿದ್ದಾರೆ. ಸಚಿವರ ಸೂಚನೆ ಮೇರೆಗೆ ಕೊಟ್ಟೆವು ಎಂದು ಅಧಿಕಾರಿ ಹೇಳಿದ ಮಾತಿದು ಎಂದರು.
ಪೊಲೀಸ್ ಎಸ್ಕಾರ್ಟ್ ಮೂಲಕ ಉಪ ಚುನಾವಣೆ ಕ್ಷೇತ್ರಗಳಿಗೆ ಹಣ ರವಾನೆಯಾಗುತ್ತಿದೆ. ಅಧಿಕಾರಿಗಳಿಂದಲೇ ಹಣ ಹಂಚಿಸುತ್ತಿದ್ದಾರೆ. ಚುನಾವಣಾ ಆಯೋಗ ಜನ ಸಾಮಾನ್ಯರ ವಾಹನ ತಪಾಸಣೆ ಮಾಡಬೇಡಿ. ಪೊಲೀಸ್ ವಾಹನಗಳನ್ನ ಮೊದಲು ತಪಾಸಣೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.