ಮೈಸೂರು: ವಿದ್ಯುತ್ ಖರೀದಿಯಲ್ಲಿ ಭ್ರಷ್ಟಚಾರ ನಡೆದಿದ್ದು, ರಾಜ್ಯಕ್ಕೆ 15 ಸಾವಿರ ಕೋಟಿ ರೂ. ನಷ್ಟವಾಗಿದೆ. ಆದರೆ ಸಿಎಂ ಯಡಿಯೂರಪ್ಪ ಅವರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪೊನ್ನರಾಜು ಅವರು ರಾಜ್ಯಕ್ಕೆ ಪ್ರತಿನಿತ್ಯ 9451 ಮೆಗಾ ವ್ಯಾಟ್ ವಿದ್ಯುತ್ ಸಾಕು ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ. ರಾಜ್ಯದ ವಿವಿಧ ಮೂಲಗಳಿಂದ 14,574 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ಆದರೆ ಬೇರೆ ಬೇರೆ ರಾಜ್ಯಗಳಿಂದ 4 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಖರೀದಿಸಿ, ಕಮಿಷನ್ ಪಡೆದುಕೊಳ್ಳಲಾಗುತ್ತಿದೆ" ಎಂದು ಆಪಾದಿಸಿದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪ ರಾಜ್ಯದಲ್ಲಿ ವಿವಿಧ ಮೂಲಗಳಿಂದ ಹೇರಳವಾಗಿ ವಿದ್ಯುತ್ ಸಿಗುತ್ತಿದ್ದರೂ ಸಹ ಹೊರಗಡೆಯಿಂದ ವಿದ್ಯುತ್ ಯಾವ ಉದ್ದೇಶದಿಂದ ಖರೀದಿ ಮಾಡಲಾಗುತ್ತಿದೆ. ಬಹಿರಂಗವಾಗಿ ಭ್ರಷ್ಟಾಚಾರ ಕಾಣುತ್ತಿದ್ದರೂ ಸಹ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸುಮ್ಮನಿದ್ದಾರೆ. ವಿದ್ಯುತ್ ಖರೀದಿಯಿಂದ ರಾಜ್ಯಕ್ಕೆ ನಷ್ಟ ಉಂಟಾಗುತ್ತಿದೆ ಎಂದು ದೂರಿದರು.
ಬಿ.ಎಸ್.ಯಡಿಯೂರಪ್ಪ ಅವರು ಜಾತಿಗೋಸ್ಕರ ನಿಗಮ ಮಂಡಳಿ ಮಾಡಿ, ಜಾತಿಗಳನ್ನು ಒಡೆದಾಳುತ್ತಿದ್ದಾರೆ. ರಾಜ್ಯದಲ್ಲಿ 208 ಜಾತಿಗಳಿವೆ. ಎಲ್ಲಾ ಜಾತಿಗಳಿಗೂ ನಿಗಮ ಮಂಡಳಿ ಸ್ಥಾಪನೆ ಮಾಡ್ತಾರಾ? ಎಲ್ಲಾ ವರ್ಗದಲ್ಲಿಯೂ ಬಡವರಿದ್ದಾರೆ. ಬಡವರಿಗಾಗಿ ನಿಗಮ ಸ್ಥಾಪಿಸಿ, ಜಾತಿಗಾಗಿ ನಿಗಮ ಬೇಡ ಎಂದರು. ಶಾಲೆ ಆರಂಭಿಸದೇ ಇರುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ಮುಂಜಾಗ್ರತಾ ಕ್ರಮ ತೆಗೆದುಕೊಂಡು 9ರಿಂದ 12ನೇ ತರಗತಿವರೆಗೆ ಪ್ರೌಢ ಶಾಲೆ-ಕಾಲೇಜು ತೆರೆಯಬೇಕು ಎಂದು ಹೇಳಿದರು.