ಮೈಸೂರು:ನಗರದಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಕಾಂಗ್ರೆಸ್ ಪಕ್ಷ ನೇಮಕ ಮಾಡಿದ್ದ ಸತ್ಯ ಶೋಧನಾ ಸಮಿತಿ ವರದಿಯನ್ನು ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಬಿಡುಗಡೆ ಮಾಡಿ ಶಾಸಕ ತನ್ವೀರ್ ಸೇಠ್, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.
ಕಳೆದ ಎರಡು ದಿನಗಳ ಹಿಂದೆ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಕಾಂಗ್ರೆಸ್ ಪಕ್ಷ ನೇಮಕ ಮಾಡಿದ್ದ ಸತ್ಯಶೋಧನಾ ಸಮಿತಿ ವರದಿಯನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿತ್ತು. ಅದೇ ವರದಿಯನ್ನು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮರು ಬಿಡುಗಡೆ ಮಾಡಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ತನ್ವೀರ್ ಸೇಠ್, ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿರುವ ಸಮಿತಿಯು ಎಫ್‌ಐಆರ್ ತಡವಾಗಲು ಕಾರಣವೇನು? ಆ ಯುವತಿ ಆ ಸಂದರ್ಭದಲ್ಲಿ ಯಾಕೆ ಅಲ್ಲಿಗೆ ಹೋಗಿದ್ದಳು? ಸದರಿ ಪ್ರಕರಣದಲ್ಲಿ ಪೊಲೀಸರ ಕಾರ್ಯ ವೈಖರಿ ಹೇಗಿತ್ತು? ಇದರಲ್ಲಿ ಹಸ್ತಕ್ಷೇಪ ಇತ್ತಾ? ಇಲ್ಲವಾ? ಸಂತ್ರಸ್ತೆಗೆ ಪೊಲೀಸರು ರಕ್ಷಣೆ ಕೊಡುವ ಜವಾಬ್ದಾರಿ ಸರಿಯಾಗಿ ನಿರ್ವಹಣೆ ಮಾಡಿದ್ದಾರಾ? ಎಂಬ ಹಲವಾರು ಪ್ರಶ್ನೆಗಳು ವರದಿಯಲ್ಲಿ ಉಲ್ಲೇಖವಾಗಿವೆ ಎಂದು ತಿಳಿಸಿದರು.
ಗೃಹ ಸಚಿವರ ರಾಜೀನಾಮೆಗೆ ಒತ್ತಾಯ:ಗ್ಯಾಂಗ್ ರೇಪ್ ಪ್ರಕರಣದಲ್ಲಿ ರಾಜ್ಯದ ಗೃಹ ಸಚಿವರು, ಪೊಲೀಸ್ ಇಲಾಖೆ ವೈಫಲ್ಯ ಕಂಡುಬರುತ್ತಿದೆ. ಪ್ರಕರಣ ಬೆಳಕಿಗೆ ಬಂದ ನಂತರ ಪೊಲೀಸರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಘಟನೆ ಬಳಿಕ ಮೈಸೂರಿಗೆ ಆಗಮಿಸಿದ್ದ ಆರಗ ಜ್ಞಾನೇಂದ್ರ ಅವರು ಪೊಲೀಸ್ ಅಕಾಡೆಮಿಯಲ್ಲಿ ಫೈರಿಂಗ್ ತರಬೇತಿಯಲ್ಲಿ ನಿರತರಾಗುವ ಮೂಲಕ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಕಾಟಾಚಾರಕ್ಕೆಂಬಂತೆ ಗ್ಯಾಂಗ್ ರೇಪ್ ನಡೆದ ಘಟನಾ ಸ್ಥಳಕ್ಕೆ ಗೃಹ ಸಚಿವರು ಹೋಗಿ ಪರಿಶೀಲಿಸಿದ್ದಾರೆ. ಘಟನೆಯ ನೈತಿಕ ಹೊಣೆಹೊತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಶಾಸಕ ತನ್ವೀರ್ ಸೇಠ್ ಒತ್ತಾಯಿಸಿದರು.