ಮೈಸೂರು:ಕಲ್ಲಡ್ಕ ಪ್ರಭಾಕರ್ ಯಾರು, ಏನು ಎಂಬುದು ಗೊತ್ತಿಲ್ಲ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಸಮಾಧಾನ ಹೊರಹಾಕಿದರು.
ಮುಂದೊಂದು ದಿನ ಕೇಸರಿ ಬಾವುಟ ರಾಷ್ಟ್ರಧ್ವಜ ಆಗಬಹುದು ಎಂಬ ಹಿಂದೂ ಪರ ಸಂಘಟನೆ ಮುಖಂಡ ಕಲ್ಲಡ್ಕ ಪ್ರಭಾಕರ್ ಹೇಳಿಕೆ ವಿಚಾರವಾಗಿ ಮೈಸೂರಿನ ಜಲದರ್ಶಿನಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಲ್ಲಡ್ಕ ಪ್ರಭಾಕರ್ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಈ ಹಿಂದೆ ಸಚಿವ (ಕೆ.ಎಸ್.ಈಶ್ವರಪ್ಪ)ರೊಬ್ಬರ ಹೇಳಿಕೆಗೆ ಹೋರಾಟ ಮಾಡಿದ್ದೆವು. ಆ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಂದ ಪ್ರತಿಕ್ರಿಯೆ ಸಿಕ್ಕಿದೆ. ಈ ರೀತಿ ಮಾತನಾಡುವವರು ರಾಷ್ಟ್ರ ದ್ರೋಹಿಗಳು, ಜನರು ದಡ್ಡರಲ್ಲ. ಈ ರೀತಿಯ ಮಾತುಗಳಿಗೆ ಮರಳಾಗುವುದಿಲ್ಲ ಎಂದರು.
ರಾಜ್ಯದ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರವಾಗಿ ಮಾತನಾಡಿ, ಇಂದು ಭಗವದ್ಗೀತೆ ವಿಚಾರದಲ್ಲಿ ಸಮಾಜವನ್ನ ಇಬ್ಭಾಗ ಮಾಡಲು ಬಿಜೆಪಿ ಮುಂದಾಗಿದೆ. ಆದರೆ ಜನ ದಡ್ಡರಲ್ಲ, ಎಲ್ಲವನ್ನ ಗಮನಿಸುತ್ತಾರೆ. ಹಿಂದೆ ರಾಜೀವ್ ಗಾಂಧಿ ಇಡೀ ದೇಶಕ್ಕೆ ರಾಮಾಯಣ, ಮಹಾಭಾರತ ಪ್ರಸಾರ ಮಾಡಿದ್ದಾರೆ. ದೂರದರ್ಶನದ ಮೂಲಕ ದೇಶದ ಜನರಿಗೆ ತಲುಪಿಸಿದ್ದಾರೆ. ರಾಜೀವ್ ಗಾಂಧಿ ಇಡೀ ದೇಶಕ್ಕೆ ಹಿರಿಯರಿಂದ ಕಿರಿಯವರೆಗೂ ಭಗವದ್ಗೀತೆ ಪರಿಚಯಿಸಿ ಫೌಂಡೇಶನ್ ಹಾಕಿಕೊಟ್ಟಿದ್ದಾರೆ ಎಂದು ಹೇಳಿದರು.