ಮೈಸೂರು :ಪ್ರತಾಪ್ ಸಿಂಹ ಅವರೇ ನಿಮ್ಮನ್ನು ಸೋಲಿಸಲು ನಿಮ್ಮ ಪಕ್ಷದ ಮುಖಂಡರೆ ಕಾಯುತ್ತಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ಸೋಮವಾರ ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗೋಷ್ಟಿಯನ್ನು ನಡೆಸಿ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಮತ್ತೆ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡಬೇಕು ಎಂದು ನಾವು ಮನವಿ ಮಾಡುತ್ತೇವೆ. ಪ್ರತಾಪ್ ಸಿಂಹ ಅವರೇ ನಿಮ್ಮವರೇ ನಿಮ್ಮನ್ನು ಸೋಲಿಸಲು ಕಾಯುತ್ತಿದ್ದಾರೆ. ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು.
ವಿದೇಶಗಳಿಗೆ ಮರಗಳ ರಫ್ತು? :ಸಂಸದರ ಸಹೋದರ ವಿಕ್ರಂ ಸಿಂಹ ಅವರು ಜಯಮ್ಮ ಎಂಬುವವರ ಜಮೀನನ್ನು ಶುಂಠಿ ಬೆಳೆಯಲು ಕೇವಲ ಒಂದು ತಿಂಗಳ ಅವಧಿಗಷ್ಟೇ ಕರಾರು ಪತ್ರ ಮಾಡಿಸಿಕೊಂಡಿದ್ದಾರೆ. ಕೇವಲ ಒಂದು ತಿಂಗಳಲ್ಲಿ ಶುಂಠಿ ಬೆಳೆಯಲು ಸಾಧ್ಯವೇ, ಒಂದು ಎಕರೆ ಮಾತ್ರ ಬಾಡಿಗೆ ಪಡೆದಿದ್ದು, ಅಷ್ಟರಲ್ಲಿ ಶುಂಠಿ ಬೆಳೆಯಲು ಸಾಧ್ಯವೇ. ಜಯಮ್ಮ ಅವರ 3.16 ಎಕರೆ ಜಮೀನಿನಲ್ಲಿ ಕೇವಲ 12 ಮರಗಳು ಮಾತ್ರ ಇದ್ದವು, ಜೊತೆಗೆ ಅದರ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿದ್ದ ಬೆಲೆ ಬಾಳುವ ಸಾಗುವಾನಿ, ನೇರಳೆ, ಹಲಸು ಸೇರಿದಂತೆ 236 ಮರಗಳನ್ನು ಕಡಿದಿದ್ದಾರೆ. ಕಡಿದ ಮರಗಳನ್ನು ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ರಫ್ತು ಮಾಡಲು ತಯಾರಿ ನಡೆಸಿದ್ದರು. ಅಲ್ಲಿನ ಅರಣ್ಯಾಧಿಕಾರಿಗಳು ಏನು ಮಾಡುತ್ತಿದ್ದರು? ಪ್ರತಾಪ್ ಸಿಂಹ ಅವರು ಈ ಬಗ್ಗೆ ಉತ್ತರ ನೀಡಬೇಕು ಎಂದು ಲಕ್ಷ್ಮಣ್ ಆಗ್ರಹಿಸಿದರು.
ಅರಣ್ಯ ಇಲಾಖೆಯನ್ನು ಹೆಚ್ಚಾಗಿ ಕೇಂದ್ರ ಸರ್ಕಾರ ನಿಯಂತ್ರಣ ಮಾಡುತ್ತದೆ. ಅವರ ಅನುಮತಿ ಇಲ್ಲದೆ ಏನು ನಡೆಯುವುದಿಲ್ಲ. ಆರ್ಎಫ್ಒ ಮತ್ತು ಡಿಎಫ್ಒ ಸೇರಿದಂತೆ ಪ್ರಮುಖ ಅಧಿಕಾರಿಗಳು ಮೌನ ವಹಿಸಿದ್ದರಾ? ಹಿಂದೆ ಸಂಸದರ ಕೈವಾಡ ಇದೆಯಾ? ಸಂಸದರು ಕೇಂದ್ರದಿಂದ ಒತ್ತಡವನ್ನು ಹೇರಿದ್ದಾರೆಯೇ? ಎಂಬುದನ್ನು ಪ್ರತಾಪ್ ಸಿಂಹ ತಿಳಿಸಬೇಕು ಎಂದು ಲಕ್ಷ್ಮಣ್ ಒತ್ತಾಯಿಸಿದರು.
ಯತೀಂದ್ರ ಆಕಾಂಕ್ಷಿ ಎಂದು ಹೇಳಿಲ್ಲ :ಸಿಎಂ ಸಿದ್ದರಾಮಯ್ಯ ಅವರುತಮ್ಮ ಮಗನನ್ನು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಗೆಲ್ಲಿಸಲು ನನ್ನ ಮತ್ತು ಕುಟುಂಬದ ಮೇಲೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಲಕ್ಷ್ಮಣ್, ಸಂಸದರು ಸುಖಾಸಮ್ಮನೆ ಯತೀಂದ್ರ ಅವರನ್ನು ಎಳೆದು ತರುತ್ತೀರಿ. ಅವರು ತಾನು ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಎಂದು ಎಲ್ಲೂ ಹೇಳಿಲ್ಲ, ಸಿದ್ದರಾಮಯ್ಯನವರು ಸಹ ನನ್ನ ಮಗ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಎಂದು ಹೇಳಿಲ್ಲ. ಸಿದ್ದರಾಮಯ್ಯ ಅವರ ವಿರುದ್ಧ ಒಕ್ಕಲಿಗ ಸಮುದಾಯವನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದೀರಿ. ಆದರೆ ಅದು ಸಾಧ್ಯವಿಲ್ಲ ಕೆಪಿಸಿಸಿ ವಕ್ತಾರರು ಹೇಳಿದರು.
ನೀವು ಮಾತೆತ್ತಿದರೆ ಸಾಕು, ನಾನೇ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಮಾಡಿಸಿದವನು ಎಂದು ಹೇಳುತ್ತೀರಿ. ಅದರಿಂದ ರಾಜಕೀಯ ಲಾಭ ಪಡೆದುಕೊಳ್ಳಬೇಡಿ. ನೀವು ಅದನ್ನು ಪುಕ್ಕಟೆ ನೀಡಿಲ್ಲ, 900 ರೂಪಾಯಿ ಚಾರ್ಜ್ ಮಾಡುತ್ತೀರಿ. ಸಿದ್ದರಾಮಯ್ಯ ಅವರು ಅಲ್ಲಿ ನಡೆಯುತ್ತಿರುವ ಅಪಘಾತಗಳ ಬಗ್ಗೆ ಸ್ಥಳ ಪರಿಶೀಲನೆ ಮಾಡಿ, ನಂತರ ಅದನ್ನು ಸರಿಪಡಿಸಿದ ಮೇಲೆ ಅಪಘಾತಗಳು ಸಂಭವಿಸಿಲ್ಲ. ಧ್ರುವನಾರಾಯಣ್ ಅವರು ಸಂಸದರಾಗಿದ್ದಾಗ ಈ ಹೆದ್ದಾರಿ ಯೋಜನೆ ಜಾರಿಗೆ ಬಂತು. ನೀವು ಹೆದ್ದಾರಿಗೆ 15,200 ಕೋಟಿ ರೂಪಾಯಿಯನ್ನು 7ಹಂತದಲ್ಲಿ ಬಿಡುಗಡೆ ಮಾಡಿಸಿದ್ದೀರಿ. ಅದರಲ್ಲಿ ನಿಮಗೆ ಎಷ್ಟು ಪರ್ಸೆಂಟ್ ಕಮಿಷನ್ ಹಣ ಬಂದಿದೆ? ಮಂಡ್ಯ ಸಂಸದೆ ಸುಮಲತಾ ಅವರ ಆಪ್ತರಾದ ಕಾಂಟ್ರಾಕ್ಟರ್ ಕಡೆಯಿಂದ ನೀವು 100 ಕೋಟಿ ಕಮಿಷನ್ ಪಡೆದಿದ್ದೀರಿ. ಪೂರ್ಣ ಪ್ರಮಾಣದಲ್ಲಿ ಹೆದ್ದಾರಿ ನಿರ್ಮಾಣ ಮಾಡದೇ ಉದ್ಘಾಟನೆ ಮಾಡಿಸಿ ನೂರಾರು ಜನರ ಸಾವಿಗೆ ಕಾರಣರಾಗಿದ್ದೀರಿ ಎಂದು ಸಂಸದರ ವಿರುದ್ಧ ಲಕ್ಷ್ಮಣ್ ಆರೋಪ ಮಾಡಿದರು.
ಇದನ್ನೂ ಓದಿ :ಬರ ಅಧ್ಯಯನಕ್ಕೆ ಬಂದಿದ್ದೇನೆ, ಬೂಟಾಟಿಕೆ ಮಾಡಲು ಬಂದಿಲ್ಲ: ಬಿ ವೈ ವಿಜಯೇಂದ್ರ