ಮೈಸೂರು:ಬೆಂಗಳೂರಿನ ಪುಲಕೇಶಿನಗರದ ಶಾಸಕರ ಮನೆ ಮೇಲೆ ದಾಳಿಗೆ ಬಿಜೆಪಿ ಕುತಂತ್ರವೇ ಕಾರಣ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಮ್.ಲಕ್ಷ್ಮಣ್ ಮೈಸೂರಿನಲ್ಲಿ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮನೆ ಮೇಲಿನ ದಾಳಿಗೆ ಬಿಜೆಪಿ ಕುತಂತ್ರವೇ ಕಾರಣವಾಗಿದೆ. ರಾಜ್ಯದಲ್ಲಿ ಶಾಸಕರಿಗೂ ರಕ್ಷಣೆ ಇಲ್ಲದಂತಾಗಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದರು.
ಈ ಗಲಭೆಯ ಮೂಲಕ ದಲಿತ ಸಮುದಾಯದ ವಿರುದ್ಧ ಮುಸ್ಲಿಂ ಸಮುದಾಯವನ್ನು ಎತ್ತಿ ಕಟ್ಟುವ ಹುನ್ನಾರವಿದೆ. ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿರುವುದರಿಂದ ಇಂತಹ ಕಿಡಿ ಹೊತ್ತಿಸಲು ಬಿಜೆಪಿಯವರು ಕಾಯುತ್ತಿದ್ದಾರೆ. ಸರ್ಕಾರದ ವೈಫಲ್ಯಗಳನ್ನು ಮರೆಮಾಚುವ ಸಲುವಾಗಿ ಇಂತಹ ಕೃತ್ಯಗಳನ್ನು ಎಸಗುವ ಮೂಲಕ ಜನರ ದಿಕ್ಕು ತಪ್ಪಿಸಲು ಬಿಜೆಪಿ ಹೊರಟಿದೆ ಎಂದು ಆರೋಪಿಸಿದರು.
ಅನಂತ್ ಕುಮಾರ್ ಹೇಳಿಕೆಗೆ ಖಂಡನೆ
ಬಿಎಸ್ಎನ್ಎಲ್ ಉದ್ಯೋಗಿಗಳು ದೇಶದ್ರೋಹಿಗಳು ಎಂಬ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಯಿಂದ ಬಿಜೆಪಿಗೆ ನಾಚಿಕೆಯಾಗಬೇಕು, ಬಿಎಸ್ಎನ್ಎಲ್ನ ಇಂದಿನ ದುಸ್ಥಿತಿಗೆ ಬಿಜೆಪಿಯೇ ಕಾರಣ.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬಿಎಸ್ಎನ್ಎಲ್ ನಷ್ಟಕ್ಕೆ ಒಳಗಾಯಿತು. ಕಳೆದ 2015ರಲ್ಲಿ ಬಿಜೆಪಿ ಸರ್ಕಾರ 3ಜಿ ತರಂಗಾಂತರ ಹರಾಜಿನಲ್ಲಿ ಬಿಎಸ್ಎನ್‌ಎಲ್ ಅನ್ನು ಭಾಗವಹಿಸಲು ಕೇಂದ್ರ ಸರ್ಕಾರ ಬಿಡಲಿಲ್ಲ. ಆಗ 3ಜಿ ತರಂಗಾಂತರವನ್ನು ಖಾಸಗಿ ಕಂಪನಿಯವರಿಗೆ ನೀಡಲಾಯಿತು.
2016ರಲ್ಲೂ 4ಜಿ ತರಂಗಾಂತರ ಹರಾಜಿನಲ್ಲಿ ಬಿಎಸ್ಎನ್ಎಲ್ ಭಾಗವಹಿಸಲು ಕೇಂದ್ರ ಸರ್ಕಾರ ಬಿಡಲಿಲ್ಲ. ಆಗಲೂ 4ಜಿ ತರಂಗಾಂತರ ವಿವಿಧ ಖಾಸಗಿ ಕಂಪನಿಗಳ ಪಾಲಾಯಿತು. 5ಜಿ ತರಂಗಾಂತರ ಹರಾಜಿನಲ್ಲೂ ಇದು ಪುನರಾವರ್ತನೆ ಆಯಿತು. ಇದೆಲ್ಲದರ ಪರಿಣಾಮವಾಗಿ ಬಿಎಸ್ಎನ್ಎಲ್ ನಷ್ಟ ಅನುಭವಿಸುವಂತಾಯಿತು ಎಂದರು.
ಆನಂತರ ಬಿಎಸ್ಎನ್ಎಲ್ ನಷ್ಟದಲ್ಲಿ ಇದೆ ಎಂದು ಬಿಂಬಿಸಿ 89 ಸಾವಿರ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ನೀಡಿದ್ದಾರೆ. ಬಿಎಸ್ಎನ್ಎಲ್ ದೇಶದಾದ್ಯಂತ ಸುಮಾರು 80 ಸಾವಿರ ಕೋಟಿಯಷ್ಟು ಆಸ್ತಿಯನ್ನು ಹೊಂದಿದ್ದು, ಇದನ್ನೂ ಖಾಸಗಿಯವರಿಗೆ ಬಿಟ್ಟು ಕೊಡಲು ಮುಂದಾಗಿದ್ದಾರೆ.
ಬಿಎಸ್ಎನ್ಎಲ್ ನಷ್ಟಕ್ಕೆ ಒಳಗಾಗಿರುವುದಕ್ಕೆ ಬಿಜೆಪಿ ನೇರ ಹೊಣೆಯಾಗಿದೆ. ಹಾಗಾಗಿ ನಿಜವಾದ ದೇಶ ದ್ರೋಹಿಗಳು ಬಿಜೆಪಿಯವರೇ ಹೊರತು ಬಿಎಸ್ಎನ್ಎಲ್ ನೌಕರರಲ್ಲ ಎಂದು ಕಿಡಿಕಾರಿದರು.