ಮೈಸೂರು: ಇತ್ತೀಚೆಗೆ ಜಗತ್ತಿನಲ್ಲಿ ವಾತಾವರಣ ವೈಪರೀತ್ಯ ದೊಡ್ಡ ಸಮಸ್ಯೆಯಾಗಿದ್ದು, ಇದಕ್ಕೆ ಉತ್ತರ ದೊರೆಯುವುದು ಕೃಷಿಯಿಂದ ಮಾತ್ರ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಇಂದು ನಗರದಲ್ಲಿ ಐದನೇ ಕಿಸಾನ್ ಸ್ವರಾಜ್ ಸಮ್ಮೇಳನ ಕುರಿತು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಾತಾವರಣ ವೈಪರೀತ್ಯ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಸಮಸ್ಯೆಯಾಗಿದೆ. ಈ ಸಂಬಂಧ ಈಜಿಪ್ಟ್ನಲ್ಲಿ ಇತ್ತೀಚೆಗೆ ವಾತಾವರಣ ವೈಪರೀತ್ಯದ ಬಗ್ಗೆ ಸಮ್ಮೇಳನ ನಡೆಯಿತು. ಮುಖ್ಯವಾಗಿ ವಾತಾವರಣ ವೈಪರೀತ್ಯದ ಸಮಸ್ಯೆಗೆ ಉತ್ತರ ದೊರೆಯುವುದು ನಮ್ಮ ಕೃಷಿ ಕ್ಷೇತ್ರದಲ್ಲಿ. ಹಾಗಾಗಿ ಮೈಸೂರಿನಲ್ಲಿ ನಡೆಯಲಿರುವ ಸ್ವರಾಜ್ ಸಮ್ಮೇಳನದಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಕೃಷಿಯ ಬಗ್ಗೆ ತಿಳಿದುಕೊಳ್ಳಬಹುದು ಎಂದರು.
ಸ್ವರಾಜ್ ಸಮ್ಮೇಳನ ಮೈಸೂರಿನಲ್ಲಿ ನಡೆಯುತ್ತಿರುವುದು ಸಂತೋಷದ ವಿಷಯ. ಸುಮಾರು 2000 ಪ್ರತಿನಿಧಿಗಳು ದೇಶದ ಬೇರೆ ಬೇರೆ ಭಾಗಗಳಿಂದ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಇಂತಹ ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷನಾಗಿರುವುದು ಸಂತೋಷ ತಂದಿದೆ. ಮೊದಲಿನಿಂದಲೂ ಮೈಸೂರು ಸಂಸ್ಥಾನ ಕೃಷಿ ಮತ್ತು ರೈತರಿಗೆ ಹೆಚ್ಜಿನ ಪ್ರೋತ್ಸಾಹ ಮತ್ತು ರೈತರ ಹಿತರಕ್ಷಣೆ ಮಾಡುತ್ತ ಬಂದಿದೆ. ಆ ಕಾರ್ಯವನ್ನು ನಾವು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.
ಇನ್ನು, ಇದೇ ತಿಂಗಳ 11, 12 ಮತ್ತು 13 ರಂದು ಐದನೇ ಕಿಸಾನ್ ಸ್ವರಾಜ್ ಸಮ್ಮೇಳನ ಕಾರ್ಯಕ್ರಮ ನಡೆಯಲಿದ್ದು, ಸಮ್ಮೇಳನ ಕುರಿತು ಸಮಿತಿಯ ಸದಸ್ಯರು ಮಾಹಿತಿ ನೀಡಿದ್ದಾರೆ. ಈ ಸಮ್ಮೇಳನವು ಸುಸ್ಥಿರ ಮತ್ತು ಸಮಗ್ರ ಕೃಷಿಯ ಮೈತ್ರಿಕೂಟ ಅಯೋಜಿಸಿದ್ದು, ದೇಶದ 23 ರಾಜ್ಯಗಳಿಂದ 2000 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಪರಿಸರ ಆಧಾರಿತ ಕೃಷಿಯ ಕಡೆ ರೈತರನ್ನು ತೊಡಗಿಸಿಕೊಳ್ಳುವುದು ಈ ಬಗ್ಗೆ ಮಾಹಿತಿಯನ್ನು ನೀಡಲು ಈ ಕೃಷಿ ಸ್ವರಾಜ್ ಸಮ್ಮೇಳನ ಆಯೋಜನೆ ಮಾಡಲಾಗಿದೆ. ಇದರಲ್ಲಿ ಕೃಷಿಯ ವೈವಿಧ್ಯಮಯ ಪ್ರದರ್ಶನ, ಹೊಸ ತಳಿ ಬೀಜ ಮೇಳ ಮುಂತಾದ ವಿಚಾರಗಳ ಬಗ್ಗೆ ತಿಳಿಸಿಕೊಡಲಾಗುವುದು. ಮೂರು ದಿನದ ಕಿಸಾನ್ ಸ್ವರಾಜ್ ಸಮ್ಮೇಳನದಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಇರಲಿವೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾಹಿತಿ ನೀಡಿದರು.
ಇದನ್ನೂ ಓದಿ:ಅವಳಿ ಜಿಲ್ಲೆಗಳಲ್ಲಿ ಉಲ್ಬಣಗೊಳ್ಳುತ್ತಿರುವ ಚರ್ಮಗಂಟು ರೋಗ : ಪಶುವೈದ್ಯರನ್ನು ನೇಮಿಸಲು ಒತ್ತಾಯ