ಕರ್ನಾಟಕ

karnataka

ETV Bharat / state

ಪೈಲ್ವಾನನ ಸವಾಲು, ಕರೆದಲ್ಲಿಗೆ ಹೋಗಿ ಬಗ್ಗು ಬಡಿದು 'ರಣಧೀರ'ರಾದ ಮಹಾರಾಜ - ಮಹಾರಾಜ ಕಂಠೀರವ ನರಸಿಂಹರಾಜ ಒಡೆಯರ್

ಕರುನಾಡಿಗೆ ಕಾಲಿಟ್ಟು ಸವಾಲು ಹಾಕಿ ಹೋಗಿದ್ದ ತಿರುಚನಪಳ್ಳಿಯ ಪೈಲ್ವಾನನಿಗೆ ಮಣ್ಣು ಮುಕ್ಕಿಸಿ, ಮೈಸೂರು ಸಂಸ್ಥಾನದ ಸ್ಥಾನಮಾನವನ್ನು ಇಮ್ಮಡಿಗೊಳಿಸಿದ ಮಹಾರಾಜ ಕಂಠೀರವ ನರಸಿಂಹರಾಜ ಒಡೆಯರ್ ನಾಡಿನ ಜನತೆ ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನ ಸಾಧಿಸಿ ತೋರಿಸಿದವರು.

ಪೈಲ್ವಾನನ ಸವಾಲು, ಕರೆದಲ್ಲಿಗೆ ಹೋಗಿ ಬಗ್ಗು ಬಡಿದು 'ರಣಧೀರ'ರಾದ ಮಹಾರಾಜ

By

Published : Sep 19, 2019, 9:15 AM IST

ಮೈಸೂರು:ಸಾರ್ವಜನಿಕವಾಗಿ ಕುಸ್ತಿ ಮಾಡಿ ಗೆದ್ದು, ಮೈಸೂರು ಸಂಸ್ಥಾನದ ಸ್ಥಾನಮಾನವನ್ನು ಇಮ್ಮಡಿಗೊಳಿಸಿದ ಮಹಾರಾಜ ಕಂಠೀರವ ನರಸಿಂಹರಾಜ ಒಡೆಯರ್. ಅವರು, ಸವಾಲು ಹಾಕಿದ ತಿರುಚನಪಳ್ಳಿಯ ಪೈಲ್ವಾನನಿಗೆ ಮಣ್ಣು ಮುಕ್ಕಿಸಿ, ಮೈಸೂರಿನ ಸಂಸ್ಥಾನದಲ್ಲಿರುವ ಜನತೆ ಎಲ್ಲ ರಂಗದಲ್ಲೂ ಪರಿಣಿತರು ಎಂದು ತೋರಿಸಿದವರು.

ಪೈಲ್ವಾನನ ಸವಾಲು, ಕರೆದಲ್ಲಿಗೆ ಹೋಗಿ ಬಗ್ಗು ಬಡಿದು 'ರಣಧೀರ'ರಾದ ಮಹಾರಾಜ

ಕಂಠೀರವ ನರಸಿಂಹರಾಜ ಒಡೆಯರ್ ಕಾಲದ(1888-1940) ಆಡಳಿತಾವಧಿಯಲ್ಲಿ ಮೈಸೂರು ಎಲ್ಲ ರಂಗದಲ್ಲಿ ಹೆಸರು ಗಳಿಸಿ ಮೆರೆಯುತ್ತಿತ್ತು. ಅಂದಿನ ಕಾಲದಲ್ಲಿ ತಿರುಚನಪಳ್ಳಿಯಲ್ಲೊಬ್ಬ ಪ್ರಖ್ಯಾತ ಪೈಲ್ವಾನನಿದ್ದ. ಈತನ ವಿರುದ್ಧ ಎಂತಹ ಘಟನುಘಟಿ ಪೈಲ್ವಾನರೂ ತರಗುಟ್ಟುತಿದ್ದರು. ಇವನ ವಿರುದ್ಧ ಯಾವ ಕುಸ್ತಿ ಪಟುವೂ ಗೆದ್ದು ಬೀಗಿರಲಿಲ್ಲ. ತನ್ನಂತ ಶಕ್ತಿಶಾಲಿ ಕುಸ್ತಿಪಟು ಯಾರು ಇಲ್ಲ ಎಂದು ಬೀಗುತ್ತಿದ್ದ ಈ ಪೈಲ್ವಾನ್, ಓಮ್ಮೆ ಮೈಸೂರಿಗೆ ಭೇಟಿ ನೀಡಿ ತನ್ನ ಲಂಗೋಟಿಯನ್ನು ಊರ ಹೊರಾವರಣದಲ್ಲಿರುವ ಮರಕ್ಕೆ ನೇತು ಹಾಕಿದ. ಜೊತೆಗೆ ಯಾರದರೂ ನನ್ನ ವಿರುದ್ಧ ಕುಸ್ತಿ ಆಡಿ ಜಯಶಾಲಿಯಾದರೆ ಈ ಲಂಗೋಟಿಯನ್ನು ತೆಗೆಯುತ್ತೇನೆ. ಇಲ್ಲವಾದರೆ, ನಾನು ಬದುಕಿರುವವರೆಗೂ ಇಲ್ಲಿ ನೇತುಹಾಕಿರುವ ಲಂಗೋಟಿ ಕೆಳಗೆ ತಲೆ ತಗ್ಗಿಸಿ ನಡೆಯಬೇಕು ಎಂದು ಜನತೆಯನ್ನು ಅವಮಾನಿಸಿ ಸವಾಲೆಸೆದು ಹಿಂತಿರುಗಿದ್ದನಂತೆ.

ಇನ್ನು ಇದರಿಂದ ಕೆರಳಿದ ಅನೇಕ ಮೈಸೂರಿನ ಕುಸ್ತಿಪಟುಗಳು, ತಿರುಚನಪಳ್ಳಿಗೆ ತೆರಳಿ, ಪೈಲ್ವಾನನೊಡನೆ ಕಾದಾಡಿ ಸೋತು ಸುಣ್ಣವಾಗಿ ಬರುತ್ತಿದ್ದರು. ಆದರೆ, ಬರೀ ಸೋಲಿನ ಸುದ್ದಿಗಳನ್ನೇ ಕೇಳಿದ ಮಹಾರಾಜ ಕಂಠೀರವ ನರಸಿಂಹರಾಜ ಒಡೆಯರ್, ತಾವೇ ಮಾರುವೇಷದಲ್ಲಿ ತಿರುಚನಪಳ್ಳಿಗೆ ತೆರಳಿ ಅಲ್ಲಿ ಮಾರುವೇಷ ತೆಗೆದು ಅಖಾಡಕ್ಕಿಳಿದು ಕುಸ್ತಿಗೆ ಮುಂದಾದರು. ಜೊತೆಗೆ ಆ ಪೈಲ್ವಾನನ್ನು ಸೆದೆಬಡಿದು, ಮಣ್ಣು ಮುಕ್ಕಿಸಿದರು. ತದನಂತರ ಅಲ್ಲಿಂದ ಪೈಲ್ವಾನನ್ನು ಕರೆದುಕೊಂಡು ಬಂದು, ಸ್ವತಃ ಅವನಿಂದಲೇ ಮರಕ್ಕೆ ನೇತು ಹಾಕಿದ್ದ ಲಂಗೋಟಿ ತೆಗೆಸಿದ್ದರು.

ಇದರಿಂದ ಸಂತೋಷಗೊಂಡ ಜನತೆ ಕಂಠೀರವ ನರಸಿಂಹರಾಜ ಒಡೆಯರ್​ ಅವರಿಗೆ ಜಯಘೋಷಣೆಗಳನ್ನು ಕೂಗಿದರು. ಅಂದಿನಿಂದ ಮಹಾರಾಜರು ‘ರಣಧೀರ’ ಕಂಠೀರವ ನರಸಿಂಹರಾಜ ಒಡೆಯರ್' ಎಂಬ ಖ್ಯಾತಿಗೆ ಪಾತ್ರರಾದರು. ಮಹಾರಾಜರು ಸ್ವತಃ ಉತ್ತಮ ಕುಸ್ತಿಪಟುಗಳು ಕೂಡ ಆಗಿದ್ದು, ನಿತ್ಯ ಚಾಮುಂಡಿಬೆಟ್ಟದಲ್ಲಿರುವ ಸಾವಿರ ಮೆಟ್ಟಲುಗಳನ್ನು ಹತ್ತುವಾಗ, ತಮ್ಮ ಹೆಗಲ ಮೇಲೆ ಬಲಿಷ್ಠ ಕರುವೊಂದನ್ನು ಹೊತ್ತು ನಡೆಯುತ್ತಿದ್ದರು ಎಂಬ ಇತಿಹಾಸವು ಕೂಡ ಇದೆ.

ರಾಜ-ಮಹಾರಾಜರು ಅರಮನೆಯೊಳಗೆ ವ್ಯಾಯಾಮ, ಕುಸ್ತಿ ಅಭ್ಯಾಸ ಮಾಡಿ, ದೇಹಸಿರಿಯನ್ನು ಕಾಪಾಡಿಕೊಳ್ಳುತ್ತಿದ್ದರು. ಆದರೆ, ಕಂಠೀರವ ನರಸಿಂಹರಾಜ ಒಡೆಯರು ತಮ್ಮ ಸಂಸ್ಥಾನದ ಸ್ಥಾನಮಾನಕ್ಕಾಗಿ ಸಾರ್ವಜನಿಕವಾಗಿ ಕುಸ್ತಿ ಮಾಡಿ ನಾಡಿಗೆ ಹೆಮ್ಮೆ ತಂದರು. ಅಂದಿನಿಂದ ಇಂದಿನವರೆಗೂ ಮೈಸೂರು ಕುಸ್ತಿಯ ತವರೂರಾಗಿದೆ.

ABOUT THE AUTHOR

...view details