ಮೈಸೂರು : ಕೋವಿಡ್ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಕೆಎಸ್‌ಐಸಿ ( Karnataka Silk Industries Corporation Ltd) ಪ್ರಸಕ್ತ ವರ್ಷ 31 ಕೋಟಿ ರೂಪಾಯಿ ಲಾಭ ಗಳಿಸಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ. ಕರ್ನಾಟಕ ರೇಷ್ಮೆ ಕೈಗಾರಿಕಾ ಸಂಸ್ಥೆಯು 2021-2022 ನೇ ಆರ್ಥಿಕ ವರ್ಷದಲ್ಲಿ 204.77 ಕೋಟಿ ವಹಿವಾಟು ನಡೆಸಿದ್ದು, 31.64 ಕೋಟಿ ಲಾಭ ಗಳಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 153.59 ಕೋಟಿ ವಹಿವಾಟು ನಡೆಸಿ 27.72 ಕೋಟಿ ಲಾಭ ಗಳಿಸಿತ್ತು ಎಂದು aವರು ಮಾಹಿತಿ ನೀಡಿದರು.
ಕಳೆದ ವರ್ಷಕ್ಕಿಂತ 50 ಕೋಟಿ ವಹಿವಾಟು ಹೆಚ್ಚಳ: ಮೈಸೂರು ರೇಷ್ಮೆ ಸೀರೆಗೆ ತನ್ನದೇ ಬ್ರಾಂಡ್ ಇದೆ. ಮೈಸೂರು ಸಿಲ್ಕ್‌ಗೆ ದೇಶ ವಿದೇಶಗಳಲ್ಲಿ ಬಹುಬೇಡಿಕೆ ಇದೆ. ಕೆಎಸ್‌ಐಸಿಯಲ್ಲಿ ಹೊಸತನ, ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯಿಂದ ಪ್ರತಿ ವರ್ಷ ಆದಾಯದಲ್ಲಿ ಏರಿಕೆ ಕಾಣುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಸುಮಾರು 50 ಕೋಟಿಗೂ ಅಧಿಕ ವಹಿವಾಟು ನಡೆದಿದೆ ಎಂದು ತಿಳಿಸಿದರು.
ನಿಗಮದಲ್ಲಿ ಮತ್ತಷ್ಟು ಸುಧಾರಿತ ಕ್ರಮಗಳು ಕೈಗೊಳ್ಳುವುದು ಹಾಗೂ ಬೇಡಿಕೆ ಆಧಾರಿತ ಡಿಸೈನ್‌ಗಳ ಸೀರೆ ಉತ್ಪಾದನೆಯ ಗುರಿ ಹೊಂದಲಾಗಿದೆ. ಈ ಮೂಲಕ ಕೆಎಸ್‌ಐಸಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಉದ್ದೇಶಿಸಲಾಗಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಮಾಹಿತಿ ನೀಡಿದ್ದಾರೆ.