ಮೈಸೂರು: ಆತ್ಮಹತ್ಯೆಯಲ್ಲಿ ದೇಶದಲ್ಲಿ ಮಹಾರಾಷ್ಟ್ರ ಮತ್ತು ತಮಿಳುನಾಡು ಮೊದಲನೇ ಸ್ಥಾನದಲ್ಲಿದ್ದು, ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಹಾಗೂ ಮಾನಸಿಕ ವೈದ್ಯ ಡಾ.ರವೀಶ್ ಕಳವಳ ವ್ಯಕ್ತಪಡಿಸಿದ್ದಾರೆ.
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ಮಹಾರಾಣಿ ಮಹಿಳಾ ಮತ್ತು ಕಲಾ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಸೆಮಿನರ್ ಹಾಲ್‌ನಲ್ಲಿ ಆಯೋಜಿಸಿದ್ದ ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆ ತಡೆಗಟ್ಟುವಿಕೆ ವಿಶೇಷ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ಆಪ್ತಸಲಹಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆ ತಡೆಗಟ್ಟುವಿಕೆ ವಿಶೇಷ ಕಾರ್ಯಕ್ರಮ.. ಪ್ರಪಂಚದಲ್ಲಿ ಪ್ರತಿ 20 ಸೆಕೆಂಡಿಗೆ ಒಬ್ಬ ವ್ಯಕ್ತಿ ಆತ್ಯಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಇತ್ತೀಚಿಗೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಪುಲಿಕಾಟ್,ಕುಕ್ಕರಹಳ್ಳಿ ಕೆರೆ ನಿಸರ್ಗ ಸೌಂದರ್ಯ ತಾಣ. ಆದರೆ, ಇತ್ತೀಚಿನ ದಿನಗಳಲ್ಲಿ ಎಸ್ಎಸ್ಎಲ್‌ಸಿ ಫಲಿತಾಂಶ ಬಂದ ಕೂಡಲೇ ಕುಕ್ಕರಹಳ್ಳಿ ಕೆರೆ ಬಳಿ ಪೊಲೀಸ್ ನಿಯೋಜನೆ ಮಾಡುವುದು, ಮನೋರಂಜನೆ ತಾಣ ಪುಲಿಕಾಟ್ ಸೂಸೈಡ್ ಪಾಯಿಂಟ್ ಆಗಿರುವುದು ಶೋಚನೀಯ ಎಂದರು.
ಉದ್ದೇಶ ಪೂರ್ವಕವಾಗಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಹಾಗೆ ಮಾಡಿಕೊಳ್ಳುತ್ತಾರೆ ಎಂದರೆ ಅದಕ್ಕೆ ಅವರು ಅನುಭವಿಸಿದ ತೊಂದರೆಗಳೇ ಕಾರಣವಾಗಿರುತ್ತವೆ. ಹಾಗಾಗಿ ಮೊದಲ ಬಾರಿಗೆ ಹೇಳುವಾಗಲೇ ಗಂಭೀರವಾಗಿ ಪರಿಗಣಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.