ಗೃಹ ಸಚಿವ ಅಮಿತ್ ಶಾ ಚುನಾವಣಾ ಭಾಷಣ ಮೈಸೂರು: ಬಿಜೆಪಿಗೆ ಮತ ಹಾಕುವುದರಿಂದ ಕರ್ನಾಟಕ ಸುರಕ್ಷಿತವಾಗಿರುತ್ತದೆ ಎಂದು ಕೇಂದ್ರ ಗೃಹಮಂತ್ರಿ ಅಮಿತ್ ಶಾ ಹೇಳಿದರು. ನಂಜನಗೂಡು ತಾಲೂಕಿನ ಎಸ್.ಹೊಸಕೋಟೆ ಗ್ರಾಮದಲ್ಲಿ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ವರುಣ ಕೂಡ ನಮಗೆ ಪ್ರಮುಖ ಚುನಾವಣೆಯಾಗಿದೆ. ವಿ.ಸೋಮಣ್ಣ ಅವರನ್ನು ಅತಿ ಹೆಚ್ಚು ಅಂತರದ ಮತಗಳಿಂದ ಗೆಲ್ಲಿಸಿ, ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಮತ್ತೆ ಸಂಕಷ್ಟ. ಕಾಂಗ್ರೆಸ್ ಸರ್ಕಾರ ಹೆಚ್ಚು ಭ್ರಷ್ಟಾಚಾರ ನಡೆಸಿದ ಸರ್ಕಾರವಾಗಿದೆ. ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟಾಚಾರ ನಡೆಸಿದರು ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಉತ್ತಮವಾಗಿ ಆಡಳಿತ ನಡೆಸಿದ್ದಾರೆ. ಆದರೆ ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಸಿದ್ದರಾಮಯ್ಯರ ಆರೋಪ ಲಿಂಗಾಯತ ಸಮಾಜಕ್ಕೆ ಮಾಡಿದ ಅಪಮಾನ ಎಂದರು.
ಸಿದ್ದರಾಮಯ್ಯ ಕೋಲಾರ, ಬಾದಾಮಿ, ಚಾಮುಂಡೇಶ್ವರಿ ಕ್ಷೇತ್ರ ಹುಡುಕಾಟದಲ್ಲಿದ್ದರು. ಕೊನೆಗೆ ವರುಣಕ್ಕೆ ಬಂದರು. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಲಿಂಗಾಯತರಿಗೆ ಕೊಟ್ಟಿರುವ ಮೀಸಲಾತಿಯನ್ನು ತೆಗೆಯುತ್ತಾರೆ. ದಲಿತರಿಗೆ ಕೊಟ್ಟಿರುವ ಮೀಸಲಾತಿಯನ್ನೂ ತೆಗೆಯುತ್ತಾರೆ ಎಂದು ತಿಳಿಸಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಈ ಭಾಗದ ಸಂಸದ ಶ್ರೀನಿವಾಸ್ ಪ್ರಸಾದ್ ಆಶೀರ್ವಾದ ನಮ್ಮ ಮೇಲಿದೆ. ನಿಮ್ಮೆಲ್ಲರ ಆಶೀರ್ವಾದದಿಂದ 20 ಸಾವಿರ ಮತಗಳ ಅಂತರದಿಂದ ಸೋಮಣ್ಣ ಗೆಲ್ಲುತ್ತಾರೆ. ಸೋಮಣ್ಣರಿಂದ ಇತಿಹಾಸ ಸೃಷ್ಟಿಯಾಗಬೇಕು ಎಂದರು.
ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮಾತನಾಡಿ, 13 ಬಜೆಟ್ ಅನ್ನು ಸಿದ್ದರಾಮಯ್ಯ ಮಂಡಿಸಿದ್ದಾರೆ. ಅವರು ನಂಜನಗೂಡು, ಮೈಸೂರು, ಟಿ.ನರಸೀಪುರ ತಾಲೂಕುಗಳಿಗೆ ಅಲೆದಾಡುತ್ತಿದ್ದಾರೆ. ವರುಣ ಕ್ಷೇತ್ರಕ್ಕೆ ಮೂಲಭೂತ ಸೌಕರ್ಯಗಳು, ಉದ್ಯೋಗಗಳನ್ನು ನೀಡಿದ್ದಾರಾ?. 15 ವರ್ಷದಲ್ಲಿ ಏನಾದರೂ ಮಾಡಿದ್ದಾರಾ?. ಹತ್ತು ವರ್ಷ ಸಿದ್ದರಾಮಯ್ಯರವರಿಗೆ ಕೊಟ್ಟಿದ್ದೀರಿ. ಐದು ವರ್ಷ ಮಗನಿಗೆ ಕೊಟ್ಟಿದ್ದೀರಿ ನನಗೆ ಐದು ವರ್ಷ ಕೊಡಿ. ಬೆಂಗಳೂರಿನ ಗೋವಿಂದರಾಜ ನಗರ ಹೇಗಿದೆಯೋ ಅದೇ ರೀತಿ ವರುಣ ಅಭಿವೃದ್ಧಿಪಡಿಸುತ್ತೇನೆ ಎಂದು ಭರವಸೆ ನೀಡಿದರು.
ನಟ ಶಶಿಕುಮಾರ್ ಮಾತನಾಡಿ, ಹೋದ ಕಡೆಯಲ್ಲೆಲ್ಲ ಬಿಜೆಪಿ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ದೇಶದಲ್ಲಿ ನರೇಂದ್ರ ಮೋದಿ ಉತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ. ಯಡಿಯೂರಪ್ಪನವರು ನನ್ನ ತಂದೆ ಸಮಾನ. ಪರಿಶಿಷ್ಟ ಪಂಗಡಕ್ಕೆ ಯಡಿಯೂರಪ್ಪನವರ ಕೊಡುಗೆ ಅಪಾರವಾಗಿದೆ. ವಾಲ್ಮೀಕಿ ಜಯಂತಿಯನ್ನು ಆಚರಣೆ ಶುರು ಮಾಡಿದ್ದರು. ವಿ.ಸೋಮಣ್ಣ ಅವರನ್ನು ವರುಣ ಕ್ಷೇತ್ರದ ಮಣ್ಣಿಗೆ ಹಾಕಿದ್ದಾರೆ. ಅವರನ್ನು ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಮತದಾರರಿಗೆ ಮನವಿ ಮಾಡಿದರು.
ಅರ್ಧಕ್ಕೆ ಎದ್ದು ಹೋದ ಯಡಿಯೂರಪ್ಪ: ಅಮಿತ್ ಶಾ ಭಾಷಣದ ವೇಳೆ ಬಿ.ಎಸ್.ಯಡಿಯೂರಪ್ಪ ಅರ್ಧಕ್ಕೆ ಎದ್ದು ಹೋದರು. ಯಡಿಯೂರಪ್ಪ ತಮ್ಮ ಭಾಷಣದಲ್ಲಿ ಒಮ್ಮೆಯೂ ಸಿದ್ದರಾಮಯ್ಯನವರ ಹೆಸರು ಪ್ರಸ್ತಾಪಿಸಲಿಲ್ಲ. ಸೋಮಣ್ಣ ಬಗ್ಗೆಯೂ ಹೆಚ್ಚು ಮಾತನಾಡಲಿಲ್ಲ. ಹೀಗಾಗಿ, ಯಡಿಯೂರಪ್ಪ ನಡೆ ಕುತೂಹಲ ಮೂಡಿಸಿತು.
ಇದನ್ನೂಓದಿ:ಹನುಮಂತನನ್ನು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಸಮಾನಾರ್ಥಕವಾಗಿ ಹೋಲಿಸುವುದು ಅವಮಾನ: ಸುರ್ಜೇವಾಲ