ಮೈಸೂರು: ನಗರದ ಕೃಷ್ಣರಾಜ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಆದರೆ, ಈ ಬಾರಿ ಹಾಲಿ ಶಾಸಕರಿಗೆ ಟಿಕೆಟ್ ಬೇಡ ಎಂಬ ಕೂಗು ಎದ್ದಿದೆ. ಇದರಿಂದ ಬಿಜೆಪಿ ಅಭ್ಯರ್ಥಿ ಬಗ್ಗೆ ಹೊಸ ಚರ್ಚೆ ಶುರುವಾಗಿದೆ. ಮತ್ತೊಂದೆಡೆ, ನಾನೇ ಅಭ್ಯರ್ಥಿ ಎಂಬ ವಿಶ್ವಾಸದಲ್ಲಿ ಹಾಲಿ ಶಾಸಕ ಎಸ್ ಎ ರಾಮದಾಸ್ ಇದ್ದಾರೆ. ಕಾಂಗ್ರೆಸ್ನಿಂದ ಕೂಡ ಅಭ್ಯರ್ಥಿ ಘೋಷಣೆ ಆಗಿಲ್ಲ. ಈ ಬಾರಿ ಜೆಡಿಎಸ್ ಕೂಡ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಲ್ಲಿದೆ.
ಜಿಲ್ಲೆಯ ಅತ್ಯಂತ ಪುಟ್ಟ ಹಾಗೂ ವಿಭಿನ್ನ ಕ್ಷೇತ್ರ ಎಂದರೆ ಕೃಷ್ಣರಾಜ. ಅಲ್ಲದೇ, ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯ ಹೆಚ್ಚು ಪ್ರತಿನಿಧಿಸುವ ಕ್ಷೇತ್ರದಲ್ಲಿ ಇದು ಒಂದು. ಇದುವವರೆಗೆ ನಾಲ್ಕು ಬಾರಿ ಗೆಲುವು ಸಾಧಿಸಿರುವ ರಾಮದಾಸ್ ಈಗಾಗಲೇ ಕ್ಷೇತ್ರದಲ್ಲಿ ಬಿರುಸಿನ ಸಂಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ನ ಮಾಜಿ ಶಾಸಕ ಎಂಕೆ ಸೋಮಶೇಖರ್ ಕೂಡ ನಿತ್ಯ ಮನೆ-ಮನೆಗೆ ಭೇಟಿ ನೀಡುತ್ತಿದ್ದಾರೆ. ಜೆಡಿಎಸ್ ಮುಖಂಡ ಕೆ.ವಿ. ಮಲ್ಲೇಶ್ ಕೂಡ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.
ಇದುವರೆಗೆ ಉಪ ಚುನಾವಣೆ ಸೇರಿ ಕ್ಷೇತ್ರದಲ್ಲಿ 13ಕ್ಕೂ ಹೆಚ್ಚು ಬಾರಿ ಚುನಾವಣೆಗಳು ನಡೆದಿವೆ. ಪಕ್ಷದ ಚಿಹ್ನೆ ಜೊತೆಗೆ ಬಹುತೇಕ ವ್ಯಕ್ತಿ ಆಧಾರಿತವಾಗಿಯೇ ಚುನಾವಣಾ ಫಲಿತಾಂಶಗಳು ಬಂದಿದೆ. ಕ್ಷೇತ್ರದಲ್ಲಿ ಒಟ್ಟಾರೆ 2,47,082 ಮತದಾರರು ಇದ್ದಾರೆ. ಇದರಲ್ಲಿ 1,22,290 ಮಹಿಳೆಯರು ಮತ್ತು 1,24,768 ಪುರುಷರು ಹಾಗೂ 24 ಇತರ ಮತದಾರರು ಸೇರಿದ್ದಾರೆ. ಬ್ರಾಹ್ಮಣರು, ಕುರುಬರು ಹಾಗೂ ಲಿಂಗಾಯತರ ಮತಗಳೇ ನಿರ್ಣಾಯಕವಾಗಿವೆ. ಈ ಬಾರಿಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಜೊತೆಗೆ ಬಿಎಸ್‌ಪಿ ಹಾಗೂ ಕರ್ನಾಟಕ ಪ್ರಜಾಕೀಯ ಪಾರ್ಟಿಯಿಂದಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತಯಾರಿ ನಡೆದಿದೆ.
ಟಿಕೆಟ್ ಆಕಾಂಕ್ಷಿತರು: ಕ್ಷೇತ್ರದಲ್ಲಿಬಿಜೆಪಿಯಿಂದಹಾಲಿ ಶಾಸಕ ರಾಮದಾಸ್ ಸೇರಿದಂತೆ ಹಲವರು ಟಿಕೆಟ್ ಆಕಾಂಕ್ಷಿತರಿದ್ದಾರೆ. ಇವರೊಂದಿಗೆ ಹೆಚ್.ವಿ. ರಾಜೀವ್ ಅವರ ಹಸರು ಕೂಡ ಕೇಳಿ ಬರುತ್ತಿದೆ. ಆದರೆ, ಚತುರ ಎನಿಸಿಕೊಂಡಿರುವ ರಾಮದಾಸ್ ಅವರಿಗೇ ಈ ಬಾರಿ ಕೂಡ ಬಿಜೆಪಿ ಟಿಕೆಟ್ ಸಿಗುವ ನಿರೀಕ್ಷೆ ಹೆಚ್ಚಿದೆ ಎನ್ನುತ್ತಾರೆ ರಾಜಕೀಯ ಚಿಂತಕರು.