ಮೈಸೂರು: ನಮ್ಮ ದೇಶದಲ್ಲಿ ಸಾಹಿತಿಯಿಂದ ಹಿಡಿದು ಸಂತವನವರೆಗೆ ಪೂರ್ಣ ಪ್ರಮಾಣದಲ್ಲಿ ಯಾರೂ ಇಲ್ಲ ಎಂದು ವಿಧಾನ ಪರಿಷತ್ ನೂತನ ಸದಸ್ಯ ಹೆಚ್.ವಿಶ್ವನಾಥ್ ತಮ್ಮ ರಾಜಕೀಯ ನಡೆಯನ್ನ ಸಮರ್ಥಿಸಿಕೊಂಡಿದ್ದಾರೆ.
ಯಾರು ಹಿಡಿದರೋ, ಬಿಟ್ಟರೋ ಗೊತ್ತಿಲ್ಲ, ಕನ್ನಡ ನನ್ನ ಕೈ ಹಿಡಿದಿದೆ: ಹೆಚ್.ವಿಶ್ವನಾಥ್ - ಕನ್ನಡ ನನ್ನನ್ನು ಪರಿಷತ್ ಸದಸ್ಯನಾಗಿಸಿದೆ: ಎಚ್.ವಿಶ್ವನಾಥ್
ಯಾರು ಕೈ ಹಿಡಿದರೋ ಬಿಟ್ಟರೋ ಗೊತ್ತಿಲ್ಲ. ಆದರೆ ಕನ್ನಡ ನನ್ನ ಕೈ ಹಿಡಿದಿದೆ. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಹೊನ್ನಕಳಸವಾಗುತ್ತೆ. ಈ ಕವಿ ವಾಣಿ ನನ್ನ ವಿಚಾರದಲ್ಲಿ ಸಾರ್ಥಕತೆ ತಂದಿದೆ ಎಂದು ವಿಧಾನ ಪರಿಷತ್ ನೂತನ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.
![ಯಾರು ಹಿಡಿದರೋ, ಬಿಟ್ಟರೋ ಗೊತ್ತಿಲ್ಲ, ಕನ್ನಡ ನನ್ನ ಕೈ ಹಿಡಿದಿದೆ: ಹೆಚ್.ವಿಶ್ವನಾಥ್ dsd](https://etvbharatimages.akamaized.net/etvbharat/prod-images/768-512-8205392-thumbnail-3x2-vish.jpg)
ನಗರದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ನಾವು ಪೂರ್ಣ ಪ್ರಮಾಣದಲ್ಲಿ ಇದ್ದರೆ ನಮ್ಮ ಹೆಂಡತಿಯೂ ನಮ್ಮನ್ನ ಬಿಟ್ಟು ಹೋಗುತ್ತಾರೆ. ರಾಜಕೀಯ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ. ಅದೇ ರೀತಿ ನಾವು ಸಹ ಅದನ್ನು ಪೂರ್ಣ ಪ್ರಮಾಣದಲ್ಲಿ ಮಾಡಲು ಆಗಲ್ಲ. ಅದೇ ರೀತಿ ಎಲ್ಲವೂ ಬದಲಾಗುತ್ತದೆ. ಸಾಹಿತಿಯ ಲೇಖನವನ್ನು ಯಾರೂ ತಡೆಯಲು ಆಗಲ್ಲ. ನಾವು ಮಾಡಿದ್ದು ಇಡೀ ದೇಶಕ್ಕೆ ಒಂದು ಮಾದರಿಯಾಗಿದೆ ಎಂದಿದ್ದಾರೆ.
ನಾವು ಆಡಳಿತ ಪಕ್ಷದಿಂದ ವಿರೋಧ ಪಕ್ಷದ ಕಡೆಗೆ ಹೋದವರು. ಇದೇ ರೀತಿ ವಿವಿಧ ಕಡೆ ನಡೆಯಿತು. ಇದನ್ನ ಜನರಿಗೆ ಅರ್ಥ ಆಗೋ ರೀತಿ ಬರೆಯಬೇಕು. ಬಾಂಬೆ ಡೈರೀಸ್ನಿಂದ ನಾನು ಯಾವುದನ್ನು ಸಾಬೀತು ಮಾಡಲು ಹೊರಟಿಲ್ಲ. ಮಾನವ ಸಂಬಂಧಗಳಿಗೆ ಒಂದು ಅರ್ಥ ಇರುವುದು ಭಾರತದಲ್ಲಿ. ನಮ್ಮ ತಂದೆ-ತಾಯಿಗಳಿಗೆ ಏನಾದ್ರು ಆದರೆ ಸಾವಿರಾರು ಕಿಲೋ ಮೀಟರ್ಗಳಿಂದ ಬರುತ್ತೇವೆ. ಇದೇ ಭಾರತದ ಮಾನವೀಯ ಧರ್ಮ. ಹಿಂದೆ ನಾನು ಕನ್ನಡ-ಸಂಸ್ಕೃತಿ ಇಲಾಖೆ ಸಚಿವನಾಗಿದ್ದೆ. ಕನ್ನಡ-ಸಂಸ್ಕೃತಿ ಇಲಾಖೆಗೆ ಪ್ರಧಾನ ಕಾರ್ಯದರ್ಶಿಯೇ ಇರಲಿಲ್ಲ. ಆ ಹುದ್ದೆ ಸೃಷ್ಟಿಸಿ, ಇಲಾಖೆಗೆ ಹೊಸ ರೂಪ ಕೊಟ್ಟವನು ನಾನು. ಈಗ ಕನ್ನಡ ಸಾಹಿತ್ಯಕ್ಕಾಗಿ ನನಗೆ ಪರಿಷತ್ ಸ್ಥಾನ ಸಿಕ್ಕಿದೆ. ರಾಜಕೀಯವಾಗಿ ಸೋಲುಂಡರೂ ನನ್ನ ಸಾಹಿತ್ಯ ಕ್ಷೇತ್ರದ ಕನ್ನಡ ನನ್ನನ್ನ ಕೈ ಹಿಡಿಯಿತು ಎಂದಿದ್ದಾರೆ.