ಮೈಸೂರು: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಸುವಂತೆ ಒತ್ತಾಯಿಸಿ ಜಾಗಟೆ ಬಾರಿಸುವ ಮೂಲಕ ವಿನೂತನವಾಗಿ ಕನ್ನಡ ವಾಟಾಳ್ ಚಳವಳಿ ಪಕ್ಷದ ಅಧ್ಯಕ್ಷ ವಾಟಳ್ ನಾಗರಾಜ್ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪೆಟ್ರೊಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಯಾಗಿದೆ. ಮೋದಿ ಸರ್ಕಾರ ಜನರ ಮೇಲೆ ದಾಳಿ ಮಾಡುತ್ತಿದ್ದಾರೆ. ಇದು ಬಡವರ ಮೇಲಿನ ದರೋಡೆ, ಶ್ರೀಮಂತರು, ಎಂಎಲ್ಎ, ಎಂಪಿ, ಮಂತ್ರಿಗಳು, ಮುಖ್ಯಮಂತ್ರಿ, ರಾಜ್ಯಪಾಲರಿಗೆ ತೊಂದರೆ ಇಲ್ಲ. ಬಡವರು ಜನಸಾಮಾನ್ಯರು ಪೆಟ್ರೋಲ್, ಡೀಸೆಲ್ ಗ್ಯಾಸ್ಗೆ ಎಲ್ಲಿಂದ ದುಡ್ಡು ಕೊಡಬೇಕು. ಮೋದಿಯವರು ಕನಿಷ್ಠ 50ರಷ್ಟು ಬೆಲೆ ಇಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಜನರ ಬೆನ್ನುಮುಳೆ ಮುರಿದಿರುವ ಕೇಂದ್ರ ಸರ್ಕಾರ; ಆರೋಪ
ಕೇಂದ್ರ ಸರ್ಕಾರ ಬೆನ್ನುಮುರಿಯುವಷ್ಟು ರಾಜ್ಯದ ಜನತೆ ಮೇಲೆ ಹೊರೆ ಹಾಕಿದೆ. ಆದರೂ ಜನರ್ಯಾರು ಯಾಕೆ ಬೀದಿಗೆ ಬರುತ್ತಿಲ್ಲ. ಬೆಲೆ ಏರಿಕೆ ಒಪ್ಪಿಕೊಳ್ಳುತ್ತೀರಾ..? ಬೀದಿಗೆ ಬರಬೇಕು. ಕೇಂದ್ರದ ವಿರುದ್ಧ ಹೋರಾಟ ಅನಿವಾರ್ಯ. ಮೂರು ಪಕ್ಷಗಳು ಕೋಮಾದಲ್ಲಿವೆ. ಮೂರೂ ಪಕ್ಷದ ಮುಖಂಡರು ಶ್ರೀಮಂತರು ಅವರಿಗೆ ಬೆಲೆ ತಟ್ಟುವುದಿಲ್ಲ. ಮೂರು ಪಕ್ಷಗಳು ಪ್ರಾಮಾಣಿಕವಾಗಿ ಬೆಲೆ ಏರಿಕೆ ವಿರುದ್ಧ ಬೀದಿಗೆ ಬರಬೇಕಿತ್ತು ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಟಕಾ ಗಾಡಿ ಮೆರವಣಿಗೆ ಮಾಡಿ ಕೈಬಿಟ್ಟರು. ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ಬಗ್ಗೆ ವಿರೋಧ ಪಕ್ಷಗಳು ವಿಫಲವಾಗಿವೆ. ಹೋಟೆಲ್ ತಿಂಡಿಗಳು, ತರಕಾರಿ, ಸೊಪ್ಪು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಮುಂದಿನ ವಾರ ಇದೇ ಸ್ಥಳದಲ್ಲಿ ಒಂದು ರೂ.ಗೆ ಒಂದು ರಾಗಿ ಮುದ್ದೆ ಮಾರಾಟ ಮಾಡುವ ಚಳವಳಿ ಮಾಡಿ ಬೆಲೆ ಏರಿಕೆ ವಿರುದ್ಧ ತೀವ್ರ ಹೋರಾಟ ಮಾಡುತ್ತೇನೆ ಎಂದರು.
ಮಾನ ಮರ್ಯಾದೆ ಇದ್ದವರು ಕೇಳೋ ಮಾತುಗಳಾ ಇವು
ಉತ್ತರ ಕರ್ನಾಟಕದಲ್ಲಿ ಎರಡು ಚುನಾವಣೆಗಳು ನಡೆಯುತ್ತಿವೆ. ಆದರೆ, ಯಾವ ಪಕ್ಷದವರು ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಿಲ್ಲ. ಒಬ್ಬರನ್ನೊಬ್ಬರು ಬೈದಾಡಿಕೊಂಡು ಕುಳಿತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ. ರಾಜ್ಯದಲ್ಲಿನ ಚುನಾವಣೆ ಭಾಷಣಗಳನ್ನು ಮಾನ ಮಾರ್ಯಾದೆ ಇರುವವರು ಕೇಳುವುದಿಲ್ಲ. ಮಾತನಾಡುವವರಿಗೆ ಗಾಂಭೀರ್ಯ, ಘನತೆ ಬೇಕು ಎಂದು ವಾಟಾಳ್ ಆಕ್ರೋಶ ವ್ಯಕ್ತಪಡಿಸಿದರು.
ರಾಜಕಾರಣಿಗಳು ಹದ್ದುಬಸ್ತಿನಲ್ಲಿ ಮಾತನಾಡಬೇಕು:
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪುಟಗೋಸಿ ವಿರೋಧ ಪಕ್ಷದ ಸ್ಥಾನ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ವಿರೋಧ ಪಕ್ಷದ ಸ್ಥಾನ ಮುಖ್ಯಮಂತ್ರಿಯಷ್ಟೇ ಜವಾಬ್ದಾರಿಯುತ ಸ್ಥಾನ. ಅದನ್ನು ಪುಟಗೋಸಿ ಎನ್ನಬಾರದು.
ವಿರೋಧ ಪಕ್ಷ ಸ್ಥಾನದ ಗಾಂಭೀರ್ಯ, ಗೌರವ ಹೊರಟೋಯ್ತು. ನೀವು ಹೀಗೆ ಮಾತನಾಡುವುದರಿಂದ ಯಾರಿಗೂ ಒಳ್ಳೆಯದು ಆಗುವುದಿಲ್ಲ. ಚುನಾವಣಾ ಆಯೋಗ ತೀವ್ರ ಕ್ರಮ ಕೈಗೊಳ್ಳಬೇಕಿತ್ತು. ಬಾಯಿಗೆ ಬಂದ ಹಾಗೇ ಮಾತನಾಡುತ್ತಿದ್ದಾರೆ. ಇದೇನು ಚುನಾವಣೆನಾ ಅಥವಾ ದರೋಡೆನಾ..? ಏನಿದು ಹುಡುಗಾಟ. ಎಲ್ಲಾ ರಾಜಕಾರಣಿಗಳು ಹದ್ದುಬಸ್ತಿನಲ್ಲಿ ಮಾತನಾಡಬೇಕು. ಪ್ರತಿಯೊಬ್ಬರ ಮಾತು ನೋವಾಗುತ್ತದೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ನಳೀನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಆಗಿದ್ದಾರೆ, ತಲೆ ಕೆಟ್ಟುಹೋಗಿದೆ. ಇಂಥ ಮಾತುಗಳು ಯಾರಿಗೂ ಗೌರವ ತರುವುದಿಲ್ಲ. ಇವರು ರಾಜಕಾರಣಿಗಳು ಆಗುವ ಬದಲು ಬೇರೆ ಏನಾದರೂ ಮಾಡಬೇಕಷ್ಟೇ ಹೊರತು ಇವರು ರಾಜಕೀಯಕ್ಕೆ, ಪ್ರಜಾಪ್ರಭುತ್ವಕ್ಕೆ, ಚುನಾವಣಾ ವ್ಯವಸ್ಥೆಗೆ ಅಪಚಾರ. ಇಂಥವರು ರಾಜಕೀಯ ವ್ಯವಸ್ಥೆಯಲ್ಲಿರಬಾರದು. ಇಂಥವರು ಇರುವುದು ಗೌರವವಲ್ಲ ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧೆ:
ಮುಂದೆ ಬರುವ ಮೈಸೂರು- ಚಾಮರಾಜನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳನ್ನು ವಿಧಾನ ಪರಿಷತ್ ಆಯ್ಕೆ ಮಾಡಬೇಕಾಗಿದ್ದು, ಸದರಿ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿದ್ದು, ಗ್ರಾ.ಪಂ, ನಗರ ಸಭೆ, ಸ್ಥಳೀಯ ಸಂಸ್ಥೆ ಸದಸ್ಯರು ಹಣ, ಜಾತಿ ಕೈಬಿಟ್ಟು ನನಗೆ ಒಂದು ಮತ ನೀಡಿ ಎಂದು ವಾಟಾಳ್ ನಾಗರಾಜ್ ಕಳಕಳಿಯಿಂದ ಮನವಿ ಮಾಡಿದರು.