ಮೈಸೂರು:ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ಆಕಾಂಕ್ಷಿಯಾಗಿ ಸ್ಪರ್ಧೆ ಮಾಡಲು ಮುಂದಾಗಿರುವ ನಟ, ಬಿಜೆಪಿ ಮುಖಂಡ ಕೆ.ಶಿವರಾಂ ಅವರು, ನಂಜನಗೂಡು ತಾಲೂಕಿನ ಗಟ್ಟವಾಡಿ, ದೊಡ್ಡಕವಲಂದೆ ಮತ್ತು ನಂಜನಗೂಡು ಶ್ರೀರಾಂಪುರ ಸೇರಿದಂತೆ ಅನೇಕ ಕಡೆ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ನಾನು ಅಧಿಕಾರಿಯಾಗಿದ್ದಂತಹ ಸಂದರ್ಭದಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದೇನೆ. ಚಾಮರಾಜನಗರ ಕೇಂದ್ರ ಸ್ಥಾನದಲ್ಲಿ ನಾನು ಎಸಿ ಆಗಿದ್ದ ಅವಧಿಯಲ್ಲಿ ಕಡು ಬಡವರನ್ನು ಗುರುತಿಸಿ ಸಾಕಷ್ಟು ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದೇನೆ. ಕ್ಷೇತ್ರಾದ್ಯಂತ ಪ್ರವಾಸ ಮಾಡಿದ್ದೇನೆ ಮತದಾರರು ತುಂಬಾ ಹತ್ತಿರದಿಂದ ನನ್ನನ್ನು ಗುರುತಿಸಿ ಗೆಲ್ಲಿಸುತ್ತಾರೆ ಎಂಬ ಅಪಾರ ನಂಬಿಕೆ ನನ್ನಲ್ಲಿದೆ. ಲೋಕಸಭಾ ಕ್ಷೇತ್ರದ ಮತದಾರರೇ ನನ್ನನ್ನು ಚುನಾವಣೆಗೆ ನೀವು ಸ್ಪರ್ಧೆ ಮಾಡಿ ಎಂದು ಹೇಳುತ್ತಿದ್ದಾರೆ. ಬಿಜೆಪಿಯಿಂದ ಚುನಾವಣೆಗೆ ಟಿಕೆಟ್ ಸಿಕ್ಕರೆ ಲಿಂಗಾಯತ ಸಮುದಾಯ, ನಾಯಕ, ಉಪ್ಪಾರ ಸಮಾಜದವರು ಬಿಜೆಪಿಗೆ ಬೆಂಬಲಿಸುತ್ತಾರೆ. ಇದಕ್ಕೂ ಮಿಗಿಲಾಗಿ ನಮ್ಮ ಸಮುದಾಯದ ಜನಸಂಖ್ಯೆ ಈ ಕ್ಷೇತ್ರದಲ್ಲಿ 4 ಲಕ್ಷಕ್ಕೂ ಅಧಿಕವಾಗಿದೆ. ಹಾಗಾಗಿ ಈ ಸಮಾಜದ ಮತ ಪಡೆದವರೆ ಚುನಾವಣೆಯಲ್ಲಿ ವಿಜಯಶಾಲಿಯಾಗಲಿದ್ದಾರೆ. ಹಾಗಾಗಿ ಈ ಭಾಗದ ತಾಲೂಕುಗಳಲ್ಲಿನ ನಮ್ಮ ಸಮುದಾಯದ ಜನರನ್ನು ಭೇಟಿ ಮಾಡಿದ್ದೇನೆ. ನಿಮಗೆ ಪಕ್ಷದವತಿಯಿಂದ ಟಿಕೆಟ್ ಸಿಕ್ಕರೆ ನಿಮ್ಮನ್ನೆ ಬೆಂಬಲಿಸುವುದಾಗಿ ಜನ ಹೇಳಿದ್ದಾರೆ. ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆ ಎಂದರು.