ಮೈಸೂರು: ಕೊರೊನಾ ಕಪಿಮುಷ್ಠಿಗೆ ಸಿಲುಕಿದ ಅವಿಭಕ್ತ ಕುಟುಂಬದ 17 ಮಂದಿ ಆತ್ಮಸ್ಥೈರ್ಯದಿಂದ ವೈರಸ್ ಮಣಿಸಿ ಮಾದರಿಯಾಗಿದ್ದಾರೆ.
ಇಲ್ಲಿನ ಸರಗೂರು ತಾಲೂಕಿನ ಬಡಗಲಪುರ ಗ್ರಾಮದಲ್ಲಿ ವಾಸವಾಗಿರುವ 17 ಮಂದಿಗೆ ಸೋಂಕು ತಗುಲಿದಾಗ ಇಡೀ ಕುಟುಂಬವೇ ಆತಂಕ ಹಾಗೂ ಭಯದಿಂದ ನಲುಗಿತ್ತು. ಆದರೆ, ಅವರಲ್ಲಿರುವ ಆತ್ಮಸ್ಥೈರ್ಯ ವೈರಸ್ ಅನ್ನು ಮನೆಯಿಂದಾಚೆ ತಳ್ಳಿದೆ.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರರ ಸಹೋದರ ಲಿಂಗೇರಾಜೇಗೌಡರಿಗೆ ಕಳೆದ ತಿಂಗಳ 24 ರಂದು ಕೊರೊನಾ ಪಾಸಿಟಿವ್ ಆಗಿತ್ತು. ಇವರ ಮೂಲಕ ಮನೆಯಲ್ಲಿರುವ 16 ಮಂದಿಗೂ ಸೋಂಕು ವಕ್ಕರಿಸಿತ್ತು. ಬಡಗಲಪುರ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅಲೀಂ ಪಾಷಾ ನೇತೃತ್ವದ ತಂಡ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಆತ್ಮಸ್ಥೈರ್ಯ ಹೇಳಿದ್ದರು.