ಮೈಸೂರು: ಶರನ್ನವರಾತ್ರಿಯ ಪ್ರಮುಖ ಆಕರ್ಷಣೆಯಾದ ರತ್ನಖಚಿತ ಸಿಂಹಾಸನದ ಜೋಡಣೆ ಸೆಪ್ಟೆಂಬರ್ 20 ರಂದು ಅರಮನೆಯ ದರ್ಬಾರ್ ಹಾಲ್ನಲ್ಲಿ ನಡೆಯಲಿದೆ. ಇದರ ಹಿನ್ನೆಲೆಯಲ್ಲಿ ಹಾಗೂ ಅರಮನೆಯ ಶರನ್ನವರಾತ್ರಿಯ ಪೂಜಾ ಕಾರ್ಯಕ್ರಮಗಳ ಹಿನ್ನಲೆ 5 ದಿನಗಳ ಕಾಲ ನಿರ್ಬಂಧಿತ ಸಮಯದಲ್ಲಿ ಅರಮನೆಗೆ ಪ್ರವಾಸಿಗರ ನಿರ್ಬಂಧ ವಿಧಿಸಿ ಅರಮನೆ ಆಡಳಿತ ಮಂಡಳಿ ಆದೇಶ ಮಾಡಿದೆ.
ರಾಜವಂಶಸ್ಥರು ಭಾಗವಹಿಸುವ ಧಾರ್ಮಿಕ ಕಾರ್ಯಗಳ ಕುರಿತು ಮಾಹಿತಿ ಮೈಸೂರು ದಸರಾದ ರಾಜ ಮನೆತನದ ಪ್ರಮುಖ ಆಕರ್ಷಣೆಯಾದ ಸಿಂಹಾಸನ ಜೋಡಣೆ ಕಾರ್ಯ ಸೆಪ್ಟೆಂಬರ್ 20 ರಂದು ನಡೆಯಲಿದ್ದು, ಜಿಲ್ಲಾಡಳಿತ ಅಧಿಕಾರಿಗಳು ಹಾಗೂ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರ ಸಮ್ಮುಖದಲ್ಲಿ ಅರಮನೆಯ ನೆಲಮಾಳಿಗೆಯ ಸ್ಟ್ರಾಂಗ್ ರೂಮ್ ನಲ್ಲಿರುವ ಬಿಡಿ ಭಾಗದ ಸಿಂಹಾಸನವನ್ನು ಸೆಪ್ಟೆಂಬರ್ 20 ರ ಬೆಳಗ್ಗೆ ಪೂಜಾ - ಕೈಂಕರ್ಯಗಳನ್ನು ನಡೆಸಿ ಭದ್ರತಾ ಕೊಠಡಿಯಿಂದ ಅಂಬಾ ವಿಲಾಸ ಅರಮನೆಗೆ ತಂದು ಅಲ್ಲಿ ನವಗ್ರಹ ಹೋಮ, ಗಣಪತಿ ಹೋಮ ಸೇರಿದಂತೆ ಹಲವಾರು ಹೋಮಗಳನ್ನು ಮಾಡಿದ ನಂತರ ಸಿಂಹಾಸನ ಜೋಡಣೆ ನಡೆಯುತ್ತದೆ.
ಸಿಂಹಾಸನ ಜೋಡಣೆ ಹೇಗಿರುತ್ತದೆ?: ಶತಮಾನಗಳಿಂದಲೂ ಅರಮನೆಯ ರತ್ನಖಚಿತ ಸಿಂಹಾಸನವನ್ನು ಮೈಸೂರಿನ ಹೊರ ಭಾಗದಲ್ಲಿರುವ ಗೆಜ್ಜಗ ಹಳ್ಳಿಯ ಯಜಮಾನರ ಕುಟುಂಬ ಸಿಂಹಾಸನ ಜೋಡಿಸುತ್ತಾ ಬಂದಿದ್ದಾರೆ.
ಈ ಸಿಂಹಾಸನವನ್ನು 13 ಭಾಗಗಳಾಗಿ ವಿಂಗಡಿಸಿ ಭದ್ರತಾ ಕೊಠಡಿಯಲ್ಲಿ ಇಟ್ಟಿರುತ್ತಾರೆ. ಇಲ್ಲಿ ರಾಜರು ಕುಳಿತುಕೊಳ್ಳುವ ಭಾಗ ಆಸನ. ಸಿಂಹಾಸನವನ್ನು ಹತ್ತಲು ಚಿನ್ನದ ಮೆಟ್ಟಿಲುಗಳು. ಸಿಂಹಾಸನದ ಮೇಲ್ಭಾಗದಲ್ಲಿ ಚಿನ್ನದ ಛತ್ರಿ ಸೇರಿದಂತೆ 13 ಭಾಗಗಳನ್ನು ಗೆಜ್ಜಗಹಳ್ಳಿ ಗ್ರಾಮಸ್ಥರು ಸೆ. 20 ರಂದು ಸಿಂಹಾಸನವನ್ನು ಜೋಡಿಸುವ ಕೆಲಸ ನಡೆಸಿ ಇದಕ್ಕೆ ಸ್ವರ್ಣಾಸನ ಜೋಡಣಾ ಕಾರ್ಯ ಎಂದು ಕರೆಯುತ್ತಾರೆ.
ಈ ರತ್ನಖಚಿತ ಸಿಂಹಾಸನದ ದಕ್ಷಿಣದಲ್ಲಿ ಬ್ರಹ್ಮ, ಉತ್ತರದಲ್ಲಿ ಶಿವ, ಮಧ್ಯ ಭಾಗದಲ್ಲಿ ವಿಷ್ಣು ದೇವರುಗಳ ಚಿತ್ರಗಳಿವೆ. ಜೊತೆಗೆ 4 ಸಿಂಹಗಳಿವೆ. ಇದರ ಜೊತೆಗೆ ಚಿನ್ನದ ಛತ್ರಿಯ ಮೇಲೆ ಸಂಸ್ಕೃತ ಶ್ಲೋಕ, ಕುದುರೆ, ಹಂಸ, ನಾಗದೇವತೆಗಳು ಹಾಗೂ ಸ್ವಸ್ತಿಕ್ ಚಿಹ್ನೆಗಳನ್ನು ಬಳಸಲಾಗಿದೆ. ಇದನ್ನು ಸೆ.20 ರಂದು ಜಿಲ್ಲಾಡಳಿತ ಹಾಗೂ ರಾಜ ವಂಶಸ್ಥರ ಸಮ್ಮುಖದಲ್ಲಿ ಜೋಡಿಸುವ ಕಾರ್ಯ ನಡೆಯಲಿದ್ದು. ಸೆ. 26 ರ ಶರನ್ನವರಾತ್ರಿಯ ಆರಂಭದ ದಿನ ಚಿನ್ನದ ಸಿಂಹಾಸನಕ್ಕೆ ಸಿಂಹವನ್ನು ಜೋಡಣೆ ಮಾಡಿ ರಾಜ ವಂಶಸ್ಥರು ಶರನ್ನವರಾತ್ರಿಯ ಪೂಜೆಯನ್ನು ನೆರವೇರಿಸಿ ಖಾಸಗಿ ದರ್ಬಾರ್ ನಡೆಸುತ್ತಾರೆ.
5 ದಿನ ಅರಮನೆಗೆ ಪ್ರವಾಸಿಗರಿಗೆ ನಿರ್ಬಂಧ:ರಾಜ ವಂಶಸ್ಥರು ನಡೆಸುವ ಧಾರ್ಮಿಕ ಪೂಜಾ ಕೈಂಕರ್ಯಗಳ ಹಿನ್ನೆಲೆಯಲ್ಲಿ ದಿನಾಂಕ 20.09.2022 ರ ಮಂಗಳವಾರ ಬೆಳಗ್ಗೆ 10 ರಿಂದ 1 ಗಂಟೆಯ ವರೆಗೆ ರತ್ನಖಚಿತ ಸಿಂಹಾಸನ ಜೋಡಣೆ ಪ್ರಯುಕ್ತ ಅರಮನೆಯ ಒಳಗೆ ವೀಕ್ಷಣೆ ಮಾಡಲು ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ಇದರ ಜೊತೆಗೆ 26.09.2022 ರ ಸೋಮವಾರ 10 ರಿಂದ 1.30 ವರೆಗೆ ಖಾಸಗಿ ದರ್ಬಾರ್ ಹಿನ್ನೆಲೆಯಲ್ಲಿ ರಾಜಮನೆತನದ ಪೂಜಾ ಕೈಂಕರ್ಯಗಳು, 04.10.2022 ರ ಮಂಗಳವಾರ 10 ರಿಂದ 2 ಗಂಟೆಯವರೆಗೆ ಅರಮನೆಯಲ್ಲಿ ಆಯುಧಪೂಜೆ 05.10.2022 ರ ಬುಧವಾರ ಪೂರ್ತಿದಿನ ವಿಜಯದಶಮಿ ಮೆರವಣಿಗೆ ಹಾಗೂ 20.10.2022 ರ ಗುರುವಾರ 10 ರಿಂದ 1 ಗಂಟೆಯ ವರೆಗೆ ಸಿಂಹಾಸನ ನಿಮಜ್ಜನ ಇರುವುದರಿಂದ ಈ ದಿನಗಳ ಈ ಸಮಯದಲ್ಲಿ ಅರಮನೆಯ ಒಳಾಂಗಣ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಅರಮನೆಯ ಆಡಳಿತ ಮಂಡಳಿಯ ಉಪ ನಿರ್ದೇಶಕರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಓದಿ:ನಾಡಹಬ್ಬ ದಸರಾಗೆ ಚಾಮರಾಜನಗರ ಜಟ್ಟಿ ತಾಲೀಮು.. ಮುಷ್ಠಿ ಕಾಳಗಕ್ಕೆ ರಕ್ತ ಹರಿಸಲು ರೆಡಿ!!