ಮೈಸೂರು: ಪಾರಂಪರಿಕ ಕಟ್ಟಡ ವ್ಯಾಪ್ತಿಯಲ್ಲಿರುವ ಜಿಲ್ಲಾಧಿಕಾರಿ ನಿವಾಸದಲ್ಲಿ ಸ್ವಿಮ್ಮಿಂಗ್ ಪೂಲ್ ಹಾಗೂ ಜಿಮ್ ಅನ್ನು ಡಿಸಿ ರೋಹಿಣಿ ಸಿಂಧೂರಿ ನಿರ್ಮಿಸಿಕೊಂಡಿದ್ದಾರೆ ಎಂದು ಜೆಡಿಎಸ್ ಮುಖಂಡ ಕೆ.ವಿ. ಮಲ್ಲೇಶ್ ಗಂಭೀರ ಆರೋಪ ಮಾಡಿದರು.
ಖಾಸಗಿ ಕಲ್ಯಾಣಮಂಟಪದಲ್ಲಿ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ಅಧಿಕೃತ ನಿವಾಸದಲ್ಲಿ ಸ್ವಿಮ್ಮಿಂಗ್ ಪೂಲ್ ಮತ್ತು ಜಿಮ್ ನಿರ್ಮಾಣ ಮಾಡಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿ ಇಂತಹ ಮೋಜು ಮಸ್ತಿ ಏಕೆ ಬೇಕಿತ್ತು? ಸ್ಮಿಮ್ಮಿಂಗ್ ಪೂಲ್ ನಿರ್ಮಿಸಲು ಯಾವ ಅನುದಾನ ಖರ್ಚು ಮಾಡಿದ್ದೀರಿ ಎಂಬುದನ್ನು ಬಹಿರಂಗಪಡಿಸಿ? ಇದಕ್ಕೆ ಸರ್ಕಾರದ ಅನುದಾನ ಬಳಸಿದ್ದೀರಾ? ಅಥವಾ ಬೇರೆ ಯಾರಾದ್ರೂ ಪ್ರಾಯೋಜಕರ ಸಹಾಯ ಪಡೆದಿದ್ದೀರಾ ಎಂದು ಪ್ರಶ್ನಿಸಿದರು.
ಕೊರೊನಾ ಕಾಲದಲ್ಲಿ ದಿನದ 24 ಗಂಟೆ ಕಾಲ ಕೆಲಸ ಮಾಡ್ತೇನೆ ಅಂತಾ ಹೇಳ್ತೀರಾ. ಜನಪರವಾಗಿ ಚಿಂತಿಸುವ ಯಾರಾದ್ರು ಡಿಸಿಗಳು ಇಂತಹ ಕೆಲಸ ಮಾಡ್ತಾರಾ? ನಿಮಗೆ ಜನಪರ ಕಾಳಜಿ ಇಲ್ಲವೆಂದು ಟೀಕಿಸಿದರು.
ಆರ್ಟಿಐ ಮೂಲಕ ಮಾಹಿತಿ ಪಡೆಯಲು ಬಯಸುವೆ. ನೀವು ಈ ಕಾಮಗಾರಿಗೆ ಬಳಸಿದ ಅನುದಾನದ ಕುರಿತು ಮಾಹಿತಿ ಕೊಡಬೇಕು. ಜನರಿಗೆ ಒಳ್ಳೆಯದು ಮಾಡಲು ಆಗಲ್ಲ ಅಂದ್ರೆ ಮೈಸೂರಿನಿಂದ ನಿರ್ಗಮಿಸಿ ಎಂದು ಒತ್ತಾಯಿಸಿದರು.
ಜನ ಯಾರೇ ಹೋಗಿ ಸಮಸ್ಯೆ ಹೇಳಿಕೊಂಡ್ರೂ ನಿಮ್ಮಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಪಾರಂಪರಿಕ ಕಟ್ಟಡಗಳ ಸಮಿತಿಗೆ ಡಿಸಿಯೇ ಅಧ್ಯಕ್ಷರು, ಯಾರೇ ಪಾರಂಪರಿಕ ಕಟ್ಟಡದ ಪಕ್ಕ ನಿರ್ಮಾಣ ಮಾಡಬೇಕಾದರೆ ಡಿಸಿ ಅನುಮತಿ ಕಡ್ಡಾಯ. ಆದರೆ, ಸ್ಮಿಮ್ಮಿಂಗ್ ಪೂಲ್ ವಿಚಾರದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ಆರೋಪಿಸಿದರು.