ಮೈಸೂರು: ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಕುರಿತು ಹಾಗೂ ನವೆಂಬರ್ 1ರಿಂದ ಆರಂಭವಾಗಲಿರುವ ಪಂಚರತ್ನ ರಥಯಾತ್ರೆ, ಪಕ್ಷ ಸಂಘಟನೆ ಸೇರಿದಂತೆ ಇತ್ಯಾದಿ ಪ್ರಮುಖ ಅಂಶಗಳ ಬಗ್ಗೆ ಜಾತ್ಯತೀತ ಜನತಾದಳ ಪಕ್ಷವು ಮೈಸೂರಿನಲ್ಲಿ ಇಂದಿನಿಂದ ಎರಡು ದಿನ ಸಮಾಲೋಚನಾ ಕಾರ್ಯಾಗಾರ ಹಮ್ಮಿಕೊಂಡಿದೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಪಕ್ಷದ ವರಿಷ್ಠ ಹೆಚ್.ಡಿ ದೇವೇಗೌಡ, ಇತರರು ಭಾಗವಹಿಸಲಿದ್ದಾರೆ.
ಜೊತೆಗೆ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಕಾಷೆಂಪೂರ್, ಸಂಸದೀಯ ಮಂಡಳಿ ಅಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಮುಂಬರುವ ವಿಧಾನಸಭೆ ಚುನಾವಣೆಯ ಸಂಭವನೀಯ ಅಭ್ಯರ್ಥಿಗಳು, ಪಕ್ಷದ ಜಿಲ್ಲಾ ಘಟಕಗಳ ಅಧ್ಯಕ್ಷರು ಸೇರಿದಂತೆ ಆಯ್ದ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಪಂಚರತ್ನ ರಥಯಾತ್ರೆ:ನವೆಂಬರ್ 1ರಿಂದ ಪಂಚರತ್ನ ರಥಯಾತ್ರೆ ಅರಂಭವಾಗುತ್ತಿದ್ದು, ಯಾತ್ರೆಯ ಅಂತಿಮ ಹಂತದ ಸಿದ್ಧತೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅಲ್ಲದೆ, ರಥಯಾತ್ರೆ ಹೇಗಿರುತ್ತದೆ? ಅದರ ಸ್ವರೂಪವೇನು? ಯಾವ ಮಾರ್ಗದಲ್ಲಿ ಸಾಗುತ್ತದೆ? ಗ್ರಾಮ ವಾಸ್ತವ್ಯ, ಜನ ಸಂಪರ್ಕ ಸಭೆ, ಸಮಾವೇಶ ಇತ್ಯಾದಿ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುವುದು.
ಈ ಪೈಕಿ ಪಂಚರತ್ನ ಕಾರ್ಯಕ್ರಮಗಳಾದ ಶಿಕ್ಷಣ, ಆರೋಗ್ಯ, ಯುವ ಮತ್ತು ಮಹಿಳಾ ಸಬಲೀಕರಣ, ಕೃಷಿ - ನೀರಾವರಿ, ಉದ್ಯೋಗ, ವಸತಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡುವ ಬಗ್ಗೆ ಸಭೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದ್ದಾರೆ.