ಮೈಸೂರು: ಜೆಡಿಎಸ್-ಬಿಜೆಪಿ ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗಂಭೀರವಾಗಿ ಒಪ್ಪಂದ ಮಾಡಿಕೊಂಡಿದ್ದವು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಜೆಡಿಎಸ್-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದವು: ಲಕ್ಷ್ಮಣ್ ಆರೋಪ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚಾಮುಂಡೇಶ್ವರಿ, ವರುಣಾ, ಬಾದಮಿಯಲ್ಲಿ ಜೆಡಿಎಸ್-ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದ್ದವು. ಇದು ನೂರಕ್ಕೆ ನೂರು ಸತ್ಯ. ಸಿದ್ದರಾಮಯ್ಯ ಹಾಗೂ ಅವರ ಪುತ್ರನನ್ನು ಸೋಲಿಸೋಕೆ ಒಳ ಒಪ್ಪಂದ ಆಗಿತ್ತು ಎಂದು ಕಿಡಿಕಾರಿದರು. ಜೆಡಿಎಸ್-ಬಿಜೆಪಿಯವರ ಒಪ್ಪಂದ ಚಾಮುಂಡೇಶ್ವರಿಯಲ್ಲಿ ಯಶಸ್ವಿಯಾಯಿತು. ಉಳಿದ ಎರಡು ಕಡೆ ಅದು ವರ್ಕ್ ಆಗಿಲ್ಲ. ಇಷ್ಟೆ ಯಾಕೆ ಮಲ್ಲೇಶ್ವರಂನಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬಿ ಫಾರಂ ಕೊಡುತ್ತಿರುವುದು ಡಿಸಿಎಂ ಅಶ್ವತ್ಥ ನಾರಾಯಣ. ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಯಾರಾಗಬೇಕೆಂದು ಅಶ್ವತ್ಥ ನಾರಾಯಣ ನಿರ್ಧಾರ ಮಾಡ್ತಿದ್ದಾರೆ. ಇದನ್ನು ಒಳ ಒಪ್ಪಂದ ಅನ್ನದೆ ಇನ್ನೆನಂತಾರೆ ಕುಮಾರಸ್ವಾಮಿಯವರೇ ಎಂದು ಪ್ರಶ್ನಿಸಿದರು.
ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ವಕ್ತಾರರ ರೀತಿ ಮಾತಾನಾಡುತ್ತಿದ್ದಾರೆ. ಜೆಡಿಎಸ್ಅನ್ನು ನಿಮ್ಮ ಫ್ಯಾಮಿಲಿ ಟ್ರಸ್ಟ್ ಮಾಡಿಕೊಂಡಿದ್ದೀರಾ? ಜೆಡಿಎಸ್ ನಿಮ್ಮದಲ್ಲ, ಅದು ಜನತಾ ಪರಿವಾರದ ಭಾಗ. ನಿಮ್ಮ ತಂದೆ ಸ್ಥಾಪಿಸಿದ್ದು ಸಮತಾ ಪಕ್ಷ. ಜೆಡಿಎಸ್ ಬಿಟ್ಟು ಸಮತಾ ಪಕ್ಷ ಸಂಘಟಿಸಿ ತೋರಿಸಿ. ನೀವು ಸಿದ್ದರಾಮಯ್ಯ, ಡಿಕೆಶಿ ಅವರನ್ನು ಟೀಕಿಸುವುದು ನಿಲ್ಲಿಸಿ. 37 ಸ್ಥಾನ ಗೆದ್ದ ನಿಮಗೆ ಸಿಎಂ ಸ್ಥಾನ ಕೊಟ್ಟ ಕಾಂಗ್ರೆಸ್ ಬಗ್ಗೆ ಕೃತಜ್ಞತೆ ಇಟ್ಟುಕೊಳ್ಳಿ ಎಂದರು.
ಸಿಎಂ ವಿರುದ್ಧ ದೇವರ ಬೀಸನಹಳ್ಳಿ ಡಿನೋಟಿಫಿಕೇಶನ್ ಪ್ರಕರಣದ ವಿಚಾರಣೆ ರದ್ಧತಿಗೆ ಕೋರ್ಟ್ ಒಪ್ಪಿಲ್ಲ. ಈಗ ಕೇಸ್ ವಿಚಾರಣೆ ಆರಂಭವಾಗುತ್ತಿದೆ. ನೀವು ಸಿಎಂ ಸ್ಥಾನದಲ್ಲಿದ್ದರೆ ನಿಷ್ಪಕ್ಷಪಾತ ವಿಚಾರಣೆ ಹೇಗೆ ಸಾಧ್ಯ? ನೀವು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಹೇಳಿದರು. ಇಲ್ಲವೇ ಸುಪ್ರೀಂ ಕೋರ್ಟ್ ಮೂಲಕ ವಿಚಾರಣೆಗೆ ತಡೆ ತಂದುಕೊಳ್ಳಿ. ಈ ಬಗ್ಗೆ ಬಿ.ಎಲ್.ಸಂತೋಷ್, ಪ್ರತಾಪ್ ಸಿಂಹ ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.