ಮೈಸೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯೊಬ್ಬರ ಸೋದರ ಎನ್ನಲಾಗಿರುವ ಕೆ.ಸುಬ್ರಮಣ್ಯ ರೈ ಎಂಬುವವರ ಮೈಸೂರಿನ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಈ ವೇಳೆ ಮನೆ ಮುಂಭಾಗದ ಅಲಂಕಾರಿಕ ಗಿಡದೊಳಗೆ ಹಣ್ಣಿನ ಬಾಕ್ಸ್ಗಳಲ್ಲಿ ಇಟ್ಟಿದ್ದ ಹಣವನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವುದನ್ನು ಮೂಲಗಳು ಖಚಿತಪಡಿಸಿವೆ.
ಕೆ.ಸುಬ್ರಹ್ಮಣ್ಯ ರೈ ಎಂಬುವವರು ಮೈಸೂರು ನಗರದ ನಿವಾಸಿಯಾಗಿದ್ದು, ಇವರ ಮನೆಯ ಮೇಲೆ ಸೋಮವಾರ ಸಂಜೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ಸಂದರ್ಭದಲ್ಲಿ ಇವರ ಮನೆಯ ಗಾರ್ಡನ್ನಲ್ಲಿದ್ದ ಅಲಂಕಾರಿಕ ಗಿಡದ ಒಳಗೆ ಇರುವ ಬಾಕ್ಸ್ಗಳಲ್ಲಿ ಪ್ಯಾಕ್ ಮಾಡಿ ಒಂದು ಕೋಟಿ ರೂ ಹಣ ಬಚ್ಚಿಟ್ಟಿದ್ದು, ಅಧಿಕಾರಿಗಳು ಪತ್ತೆ ಹಚ್ಚಿ ಹಣ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಐಟಿ ಮೂಲಗಳಿಂದ ತಿಳಿದು ಬಂದಿದೆ. ಮಂಗಳವಾರವೂ ಸಹ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.