ಮೈಸೂರು: ಬರೆದಂತೆ ಬದುಕುವುದು ನಮ್ಮ ಹೊಣೆಗಾರಿಕೆ. ಸಾಹಿತ್ಯ ಬರೆಯುವ ಪ್ರತಿಯೊಬ್ಬರಿಗೂ ಕೂಡ ಸಾಮಾಜಿಕ ಜವಾಬ್ದಾರಿಯಿದೆ ಎಂದು ಕವಿ ಎಸ್.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ. ದಸರಾ ಪ್ರಯುಕ್ತ ನಗರದ ಮಾನಸ ಗಂಗೋತ್ರಿಯಲ್ಲಿನ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆಯುತ್ತಿರುವ ಕವಿಗೋಷ್ಠಿಯ ಮೂರನೇ ದಿನವಾದ ಗುರುವಾರ ಪ್ರಾದೇಶಿಕ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾತನಾಡಿದರು.
ನಮ್ಮ ದೇಶವನ್ನೂ ಒಳಗೊಂಡಂತೆ ಇಡೀ ಜಗತ್ತಿನ ವ್ಯಾಪ್ತಿಯೊಳಗೆ ನೋಡಿದರೆ ಮಕ್ಕಳು, ಮಹಿಳೆಯರ ಮೇಲಾಗುತ್ತಿರುವಂತಹ ಹಲ್ಲೆಯಿಂದ ಹಿಡಿದು ಯುದ್ಧ ಉಂಟು ಮಾಡುತ್ತಿರುವ ಭೀತಿ ಮತ್ತು ಅಮಾನವೀಯತೆಯ ವಿಜೃಂಭಣೆಯನ್ನು ನೋಡಿದಾಗ ಮಾತು ಕಟ್ಟುತ್ತದೆ. ಜಗತ್ತಿನ ಯಾವ ಮೂಲೆಯೂ ಕೂಡ ಸುರಕ್ಷಿತವಾಗಿ ಉಳಿಯಲಾರದ ಪರಿಸ್ಥಿತಿ ಉಂಟಾಗಿದೆ. ಜನಾಂಗೀಯ ದ್ವೇಷ ಇಡೀ ಜಗತ್ತಿಗೆ ವ್ಯಾಪಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾವ್ಯ, ಸಾಹಿತ್ಯ, ಕಲೆಗೆ ಒಂದು ಹೊಣೆಗಾರಿಕೆ ಇದೆ. ಅದು ಸಾಮಾಜಿಕ ಹೊಣೆಗಾರಿಕೆ. ಯಾವುದೇ ಭಾಷೆಯ ಸಾಹಿತ್ಯ, ಕಲೆ ಅನ್ನುವುದು ಕೇವಲ ಭಾಷೆಗೆ ಮಾತ್ರ ಸೀಮಿತವಾದಂತೆ ಮಾತನಾಡುವುದಿಲ್ಲ. ಅದು ವಿಶ್ವ ವ್ಯಾಪ್ತಿಯೊಳಗೆ ಲೋಕದರ್ಶನ ಕಟ್ಟಿಕೊಡುತ್ತದೆ. ಈಗಿನ ವಾತಾವರಣದೊಳಗಿನ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತಂತಹ ಮನಸ್ಸುಗಳ ಮಾತುಗಳನ್ನು ಪತ್ರಿಕೆಗಳಲ್ಲಿ ನಾವು ಕಾಣಬಹುದೆಂದರು.
ಜಗದ್ಗುರುಗಳೆಂದು ಅನಿಸಿಕೊಂಡವರು ಕೂಡ ಅವರವರ ಜಾತಿಗೆ ಜಗದ್ಗುರುಗಳೇ ಹೊರತು, ನಿಜವಾದ ಜಗತ್ತಿಗೆ ಗುರುಗಳಲ್ಲ. ನಮಗೆ ನಮ್ಮ ಬರಹಕ್ಕೆ ಸಾಮಾಜಿಕ ಜವಾಬ್ದಾರಿ ಇದೆ. ಆ ಜವಾಬ್ದಾರಿಯನ್ನು ಅರ್ಥ ಮಾಡಿಕೊಂಡು ಬದುಕಿದರೆ ಮಾತ್ರ ನಮಗೆ ಮಾತನಾಡುವ ನೈತಿಕ ಶಕ್ತಿ ಮತ್ತು ಧೈರ್ಯ ಇರುತ್ತದೆ ಎಂದು ಹೇಳಿದರು.
ಮಕ್ಕಳ ದಸರಾ:ಮಕ್ಕಳ ದಸರಾದಲ್ಲಿ ವಿದ್ಯಾರ್ಥಿಗಳು ನಾಡಿನ ಹಿರಿಮೆ-ಗರಿಮೆಯನ್ನು ಸಾರಿದರು. ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಜಗನ್ಮೋಹನ ಅರಮನೆಯಲ್ಲಿ ಗುರುವಾರ ನಡೆದ ಮಕ್ಕಳ ದಸರಾದಲ್ಲಿ ಜಿಲ್ಲಾ 9 ತಾಲೂಕುಗಳಿಂದ ಆಗಮಿಸಿದ ವಿದ್ಯಾರ್ಥಿಗಳು ನೃತ್ಯದ ಮೂಲಕ ಕನ್ನಡದ ಶಕ್ತಿ ಹಾಗೂ ವೈಭವ ಸಾರಿದರು.