ಮೈಸೂರು: ತ್ಯಾಗ, ಬಲಿದಾನ, ಹೋರಾಟದಿಂದ ಸ್ವಾತಂತ್ರ್ಯ ಸಿಕ್ಕಿದೆ. ಇದು ಹಿರಿಯರು ನಡೆಸಿದ ಹೋರಾಟದ ಫಲ. ಕಾಂಗ್ರೆಸ್ನವರು ಹರ್ ಘರ್ ತಿರಂಗ ಅಭಿಯಾನದ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರ್ ಘರ್ ತಿರಂಗಕ್ಕೆ ಕಾಂಗ್ರೆಸ್ ಟೀಕೆ ಸರಿಯಲ್ಲ. ಸ್ವಾತಂತ್ರ್ಯ ಹೋರಾಟವನ್ನು ತಿರುಚದೇ ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸಬೇಕಿದೆ. ತ್ರಿವರ್ಣ ಧ್ವಜದಲ್ಲಿ ಭಾರತದ ಏಕತೆ, ಶಕ್ತಿ, ಸ್ವಾತಂತ್ರ್ಯ, ಭವಿಷ್ಯ ಎಲ್ಲವೂ ಅಡಗಿದೆ. ಅದರ ಬಗ್ಗೆ ವಿರೋಧ ಮಾಡುವುದು, ಟೀಕೆ ಮಾಡುವುದು ದೇಶ ವಿರೋಧಿ ಕೃತ್ಯವಿದ್ದಂತೆ ಎಂದರು.
ಕೀಳು ಮಟ್ಟದ ಮಾತಿಗೆ ಜನತೆ ಬೆಲೆ ಕೊಡುವುದಿಲ್ಲ. ಜನ ಮತ್ತಷ್ಟು ಸ್ಫೂರ್ತಿ, ಪ್ರೇರಣೆಯಿಂದ ಹರ್ ಘರ್ ತಿರಂಗ ಅಭಿಯಾನಕ್ಕೆ ಕೈಜೋಡಿಸುತ್ತಿದ್ದಾರೆ. ಸ್ವಾತಂತ್ರ್ಯದ ಬಗ್ಗೆ ಕೆಲವರಿಗೆ ಇತಿಹಾಸ ಗೊತ್ತಿಲ್ಲ. ಕೆಲವರು ಅದನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.