ಮೈಸೂರು:ಕಂದಾಯ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಅರಣ್ಯ ಮತ್ತು ಕಂದಾಯ ಭೂಮಿಯ ಜಂಟಿ ಸಮೀಕ್ಷೆ ನಡೆಸುವ ಮೂಲಕ ಕಾನೂನು ವ್ಯಾಪ್ತಿಯಲ್ಲಿ ಹಕ್ಕುಪತ್ರದ ಸಮಸ್ಯೆ ಪರಿಹರಿಸಲಾಗುವುದು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದ್ದಾರೆ.
ಶಾಸಕ ಅನಿಲ್ ಚಿಕ್ಕಮಾದು ಪಾಲ್ಗೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಡಿ.ಬಿ.ಕುಪ್ಪೆ ವ್ಯಾಪ್ತಿಯಲ್ಲಿ 12 ಕುಟುಂಬಗಳು ಅರಣ್ಯ ವಾಸಿಗಳು ಎಂಬ ಬಗ್ಗೆ ಇರುವ ಗೊಂದಲದ ಕುರಿತಂತೆ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ಒದಗಿಸಲು ಶೀಘ್ರವೆ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸಭೆ ನಡೆಸಿ, ಇಂತಹ ಸಮಸ್ಯೆ ಇರುವ ರಾಜ್ಯದ ಎಲ್ಲ ಹಾಡಿ, ಮುಳುಗಡೆ ಪ್ರದೇಶದ ಸಂತ್ರಸ್ತರ ಜಮೀನುಗಳ ಕುರಿತಂತೆ ಪರ್ಯಾಲೋಚಿಸುವುದಾಗಿ ಭರವಸೆ ಕೊಟ್ಟರು.
ಆನೆ ಹಾವಳಿಗೆ ಬ್ಯಾರಿಕೇಡ್ ನಿರ್ಮಿಸಲು ಕ್ರಮ: ಅನಿಲ್ ಚಿಕ್ಕಮಾದು ಅವರು, ತಮ್ಮ ಕ್ಷೇತ್ರದಲ್ಲಿ ಆನೆಗಳ ಹಾವಳಿ ಇದ್ದು ಕನಿಷ್ಠ 72 ಕಿಲೋಮೀಟರ್ ರೈಲ್ವೆ ಬ್ಯಾರಿಕೇಡ್ ನಿರ್ಮಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಒಂದೇ ವರ್ಷದಲ್ಲಿ 72 ಕಿಲೋಮೀಟರ್ ಒಂದೇ ಭಾಗದಲ್ಲಿ ನಿರ್ಮಿಸಲು ಸಾಧ್ಯವಿಲ್ಲ. ಆದರೆ ಆನೆಗಳ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ಆದ್ಯತೆಯ ಮೇರೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದರು.
ಇದನ್ನೂ ಓದಿ:ಜನಸೇವಾ ಟ್ರಸ್ಟ್ಗೆ ಕೊಟ್ಟಿದ್ದ ಭೂಮಿಗೆ ತಡೆ ನೀಡಿದ್ದು ಸೇಡಿನ ರಾಜಕಾರಣ: ಮಾಜಿ ಸಿಎಂ ಬೊಮ್ಮಾಯಿ ಕಿಡಿ