ಕರ್ನಾಟಕ

karnataka

ETV Bharat / state

ಶ್ರೀಕಂಠೇಶ್ವರ ದೇಗುಲದಲ್ಲಿ ಹಳೆಯ ಭದ್ರಕಾಳಿ ವಿಗ್ರಹ ಸ್ಥಳಾಂತರವೋ ಅಥವಾ ನಾಪತ್ತೆಯೋ? - ಹಳೆಯ ಭದ್ರಕಾಳಿ ವಿಗ್ರಹ ಸ್ಥಳಾಂತರ

ಶ್ರೀಕಂಠೇಶ್ವರ ದೇಗುಲದಲ್ಲಿದ್ದ ಭದ್ರಕಾಳಿ ಇದ್ದಕ್ಕಿದ್ದಂತೆ ಕಾಣೆಯಾಗಿದೆ. ಈ ಬಗ್ಗೆ ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ.

ಭದ್ರಕಾಳಿ
ಭದ್ರಕಾಳಿ

By

Published : Sep 17, 2021, 11:57 AM IST

ಮೈಸೂರು: ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ವೀರಭದ್ರ ಮೂರ್ತಿಯ ಪಕ್ಕದಲ್ಲಿದ್ದ ಭದ್ರಕಾಳಿ ವಿಗ್ರಹ ಕಾಣೆಯಾಗಿದೆ. ಯಾವುದೇ ಮುನ್ಸೂಚನೆಯಿಲ್ಲದೇ ಅಧಿಕಾರಿಗಳು ಸ್ಥಳಾಂತರ ಮಾಡಿದ್ದಾರೆಯೋ ಅಥವಾ ನಾಪತ್ತೆಯಾಗಿದೆಯೋ ಎಂಬ ಬಗ್ಗೆ ಭಕ್ತರು, ಸಾಮಾಜಿಕ ಜಾಲತಾಣದಲ್ಲಿ ಭದ್ರಕಾಳಿ ಫೋಟೋ ಹಾಕಿ ಪ್ರಶ್ನಿಸುತ್ತಿದ್ದಾರೆ.

ಶ್ರೀಕಂಠೇಶ್ವರ ದೇಗುಲದಲ್ಲಿ ಹಳೆಯ ಭದ್ರಕಾಳಿ ವಿಗ್ರಹ ಸ್ಥಳಾಂತರವೋ ಅಥವಾ ನಾಪತ್ತೆಯೋ?

ಶ್ರೀಕಂಠೇಶ್ವದ ದೇಗುಲದ ವೀರಭದ್ರ ಮೂರ್ತಿ ಪಕ್ಕದಲ್ಲಿದ್ದ ಭದ್ರಕಾಳಿ ವಿಗ್ರಹ ಕಾಣಿಸುತ್ತಿಲ್ಲ. ಈ ಬಗ್ಗೆ ಭಕ್ತರು, ದೇವಸ್ಥಾನದ ಸಿಬ್ಬಂದಿ, ಆಡಳಿತ ಮಂಡಳಿಗೆ ಪ್ರಶ್ನಿಸಿದರೆ, ಸರಿಯಾದ ಮಾಹಿತಿ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

ವಿಗ್ರಹ ಸ್ಥಳಾಂತರ ಮಾಡಬೇಕಿದ್ದಲ್ಲಿ ಸಾಕಷ್ಟು ನಿಯಮಗಳನ್ನು ಅನುಸರಿಸಬೇಕಿದೆ. ಆದರೆ, ಸಿಬ್ಬಂದಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತರದೆ ದಿಢೀರ್ ಆಗಿ ವಿಗ್ರಹ ಸ್ಥಳಾಂತರಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸೂಕ್ತ ನಿರ್ವಹಣೆಯ ಕೊರತೆ

ವಿಗ್ರಹಗಳ ಸರಿಯಾದ ನಿರ್ವಹಣೆ ಇಲ್ಲದೇ ಹಾಗೂ ಅಜಾಗರೂಕತೆಯಿಂದ ಮೂರ್ತಿಯು ಮುರಿದು ಬಿದ್ದಿರಬಹುದೆಂದು ಶಂಕಿಸಲಾಗಿದ್ದು, ಈ ಸಂಗತಿ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ತಿಳಿಯಬಾರದೆಂದು ಗೌಪ್ಯತೆ ಕಾಪಾಡಲಾಗುತ್ತಿದೆ ಎಂಬ ಅನುಮಾನವಿದೆ.

ದೇವಾಲಯಗಳ ನಿರ್ಮಾಣ ಕಾಲದಲ್ಲೇ ಆಲಯದ ಎಡಭಾಗದಲ್ಲಿ 64 ನಯನಾರ್ ವಿಗ್ರಹಗಳು ಬಲಭಾಗದಲ್ಲಿ 18 ಶಿವನ ಅವತಾರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ನೂರಾರು ವರ್ಷಗಳ ಹಿಂದೆ ಪ್ರತಿಷ್ಠಾಪನೆಗೊಂಡ ವಿಗ್ರಹಕ್ಕೆ ಹಾಕಲಾಗಿದ್ದ ಅಷ್ಟಬಂಧನ ಶಕ್ತಿ ಕಳೆದುಕೊಂಡು ಮೂರ್ತಿಗಳು ಅಲುಗಾಡುವ ಸ್ಥಿತಿ ತಲುಪಿವೆ. ಅದರ ದುರಸ್ತಿ ಕಾರ್ಯವನ್ನೂ ಮಾಡಿಲ್ಲ.

ಈ ಕುರಿತು ಈ ಹಿಂದೆಯೇ ಅಷ್ಟ ಮಂಗಲ ಪ್ರಶ್ನೆ ಹಾಕಿದ್ದ ಸಂದರ್ಭದಲ್ಲಿ ಅಷ್ಟಬಂಧನ ಹಾಕಿ ಕಲಾಪೂರ್ಣ ಮಾಡಬೇಕೆಂದು ಪ್ರಸ್ತವಾನೆ ಸಲ್ಲಿಸಲಾಗಿತ್ತು. ಆದರೆ, ಈ ವಿಚಾರದಲ್ಲಿ ಪುರಾತತ್ವ ಇಲಾಖೆಯ ಅಧಿಕಾರಿಗಳು ಆಸಕ್ತಿ ತೋರಲಿಲ್ಲ ಎಂಬುದು ತಿಳಿದು ಬಂದಿದೆ.

ದೇವಾಲಯಕ್ಕೆ ಹುಂಡಿ ಸಂಗ್ರಹ, ವಾಹನ ನಿಲುಗಡೆ ಟೆಂಡರ್, ಚಪ್ಪಲಿ ಟೆಂಡರ್ ,ಶೌಚಾಲಯದ ಟೆಂಡರ್, ಲಾಡು, ಕಲ್ಲು ಸಕ್ಕರೆ, ವಿಶೇಷ ದರ್ಶನದ ಟಿಕೆಟ್ ಹೀಗೆ ತಿಂಗಳಿಗೆ ಕೋಟಿ ಕೋಟಿ ಆದಾಯವಿದೆ. ಆದರೂ, ಮೂರ್ತಿಗಳ ಸಂರಕ್ಷಣೆಗೆ ಆಸಕ್ತಿ ತೋರದಿರುವುದು ದೇಗುಲದ ಆಡಳಿತ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.

ನಿತ್ಯ ದೇವಾಲಯಕ್ಕೆ ಬರುವ ಭಕ್ತರು ದೇವಿಯ ಮೂರ್ತಿ ಕಾಣೆ ಆಗಿರುವ ಕುರಿತು ಪ್ರಶ್ನಿಸುತ್ತಿದ್ದಾರೆ. ದೇಗುಲದ ಸಿಬ್ಬಂದಿ ಯಾರಿಗೂ ಸಮಂಜಸವಾದ ಉತ್ತರವನ್ನು ನೀಡುತ್ತಿಲ್ಲ. ಈ ಹಿಂದೆ ತೆಗೆದ ಪೋಟೋಗಳನ್ನು ಇಟ್ಟು ದೇವಿ ಎಲ್ಲಿ ಮಾಯವಾಗಿದ್ದಾಳೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಇಲ್ಲೂ ಕಾಣಿಸಿಕೊಂಡಿತಾ ಜ್ವರ?: ರಾಯಚೂರಿನಲ್ಲಿ ಡೆಂಘೀಗೆ ಬಾಲಕ ಬಲಿ?

ಈ ಪುರಾತನ ಭದ್ರಕಾಳಿ ವಿಗ್ರಹವನ್ನು ಸ್ಥಳಾಂತರ ಮಾಡಲಾಗಿದೆಯೇ ಅಥವಾ ನಾಪತ್ತೆಯಾಗಿದೆಯೇ ಎಂಬ ಬಗ್ಗೆ ದೇವಾಲಯದ ಆಡಳಿತ ಮಂಡಳಿ ಸ್ಪಷ್ಟೀಕರಣ ನೀಡಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.

ABOUT THE AUTHOR

...view details