ಮೈಸೂರು :ಮುಂಬರುವ ವಿಧಾನಸಭಾ ಚುನಾವಣಾ ದೃಷ್ಟಿಯಿಂದ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯನ್ನ ಬಲಪಡಿಸಲು ಇತರ ಪಕ್ಷದ ಪ್ರಭಾವಿ ನಾಯಕರನ್ನ ಸೆಳೆಯಲು ಬಿಜೆಪಿ ಮಾಸ್ಟರ್‌ಪ್ಲ್ಯಾನ್ ಹಾಕಿದೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಅಷ್ಟೊಂದು ಪ್ರಬಲವಾಗಿಲ್ಲ. ಈ ಭಾಗದ ಹಾಸನ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರಬಲವಾಗಿವೆ. ಮುಂಬರುವ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಬಿಜೆಪಿ ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಈ ಭಾಗದ ಜೆಡಿಎಸ್ ಹಾಗೂ ಕಾಂಗ್ರೆಸ್ನ ಮುಖಂಡರನ್ನ ಸೆಳೆಯಲು ಪ್ರಯತ್ನ ಮಾಡುತ್ತಿದೆ. ಈ ಸಂಬಂಧ ಹಲವು ಸುತ್ತಿನ ಮಾತುಕತೆಗಳು ಸಹ ನಡೆದಿವೆ.
ಸುಳಿವು ನೀಡಿದ ಸಚಿವ ಎಸ್ ಟಿ ಸೋಮಶೇಖರ್ :ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸೇರಲು ಐದಾರು ಮಂದಿ ಘಟಾನುಘಟಿ ನಾಯಕರುಗಳು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರ ಅನುಮತಿ ಪಡೆದ ನಂತರ 2ನೇ ಹಂತದ ಆಪರೇಷನ್ ನಡೆಯಲಿದೆ. ಹಳೆ ಮೈಸೂರು ಭಾಗದಲ್ಲಿ ಎರಡೂ ಪಕ್ಷದಿಂದ ದೊಡ್ಡ ನಾಯಕರೇ ಬಿಜೆಪಿಗೆ ಬರಲಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದ್ದಾರೆ. ನಂತರ ಯಾರ್ಯಾರು ಪಕ್ಷ ಸೇರ್ಪಡೆ ಆಗಲಿದ್ದಾರೆ ಎಂಬ ಚರ್ಚೆಗಳು ಈಗ ಆರಂಭ ಆಗಿವೆ.
ಈ ನಡುವೆ ಮೊನ್ನೆ ಮಾಧ್ಯಮಗಳ ಜೊತೆ ಮಾತನಾಡುತ್ತ ಬಿಜೆಪಿ ಶಾಸಕ ಎಲ್. ನಾಗೇಂದ್ರ, ಶಾಸಕ ಜಿ.ಟಿ. ದೇವೇಗೌಡರು ಬಿಜೆಪಿ ಪಕ್ಷಕ್ಕೆ ಬರುವುದಾದರೆ ಅವರ ಮಗನಿಗೆ ನನ್ನ ಚಾಮರಾಜ ಕ್ಷೇತ್ರವನ್ನ ಬಿಟ್ಟುಕೊಡಲು ನಾನು ಸಿದ್ಧನಿದ್ದೇನೆ ಎಂದಿದ್ದರು. ಈ ಹೇಳಿಕೆ ಬಂದ ನಂತರ ಹಳೇ ಮೈಸೂರು ಭಾಗದಲ್ಲಿ ಯಾರ್ಯಾರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ ಎಂಬ ಚರ್ಚೆಗಳು ಆರಂಭ ಆಗಿವೆ.
ಶಾಸಕ ಜಿ.ಟಿ ದೇವೇಗೌಡ ಬಿಜೆಪಿ ಸೇರ್ತಾರಾ?:ಚಾಮುಂಡೇಶ್ವರಿ ಕ್ಷೇತ್ರದ ಜೆಡಿಸ್ ಶಾಸಕ ಜಿ.ಟಿ. ದೇವೇಗೌಡ ಈಗಾಗಲೇ ಜೆಡಿಎಸ್ನಿಂದ ದೂರ ಇದ್ದಾರೆ. ಅವರು ಹಾಗೂ ಅವರ ಮಗ ಜಿ.ಟಿ. ಹರೀಶ್ ಗೌಡ ಕಾಂಗ್ರೆಸ್ ಸೇರಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಜಿ.ಟಿ ದೇವೇಗೌಡ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕ್ರಮದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆಗಳು ನಡೆದಿದ್ದವು.