ಮೈಸೂರು: ವಿಶ್ವವಿದ್ಯಾಲಯಗಳಿಗೆ ಉತ್ತಮ ಮತ್ತು ಅರ್ಹ ಕುಲಪತಿಗಳು ನೇಮಕವಾಗಬೇಕು. ವಿಶ್ವವಿದ್ಯಾಲಯದ ನಾಯಕರಾಗಿ ಗುರುತಿಸಿಕೊಳ್ಳುವ ಅವರ ಪಾತ್ರ ಬಹಳ ಪ್ರಮುಖವಾದದ್ದು. ಸಾಮಾನ್ಯವಾಗಿ ವಿಶ್ವವಿದ್ಯಾಲಯದ ಕಾರ್ಯ ನಿರ್ವಾಹಕ ಅಥವಾ ಔಪಚಾರಿಕ ಮುಖ್ಯಸ್ಥರಾಗಿರುತ್ತಾರೆ. ಆದರೆ, ಕುಲಪತಿಗಳ ನೇಮಕಾತಿ ಪಾರದರ್ಶಕವಾಗಿ ನಡೆಯುತ್ತಿಲ್ಲ ಎನ್ನುವುದು ಹಲವರ ಅಭಿಪ್ರಾಯ.
ಉನ್ನತ ಶಿಕ್ಷಣದಲ್ಲಿ ವಿವಿಗಳ ಪಾತ್ರ ಮಹತ್ವ ಪಡೆದಿದ್ದು, ದೇಶದಲ್ಲಿ ಸರ್ಕಾರಿ ಹಾಗೂ ಖಾಸಗಿ ವಿವಿಗಳು 850ಕ್ಕೂ ಹೆಚ್ಚೇ ಇದೆ. ಕುಲಪತಿಗಳ ನೇಮಕ ಸರಿಯಾಗಿ ನಡೆಯದೇ ಇರುವುದರಿಂದ ವಿಶ್ವವಿದ್ಯಾಲಯಗಳ ಜೊತೆಗೆ ವಿದ್ಯಾರ್ಥಿಗಳ ಬೆಳವಣಿಗೆ ಕುಂಠಿತವಾಗಿದೆ ಎನ್ನುವುದು ಕೆಲವರ ವಾದ.
ಕುಲಪತಿಗಳ ನೇಮಕಾತಿ ಪ್ರಕ್ರಿಯೆ ಕುರಿತು ಪ್ರತಿಕ್ರಿಯೆ ಕುಲಪತಿಗಳನ್ನು ನೇಮಕ ಮಾಡಲು search ಕಮಿಟಿಯನ್ನು ಮಾಡಬೇಕು. ಈ ಸರ್ಚ್ ಕಮಿಟಿಯಲ್ಲಿ ಉನ್ನತ ಶಿಕ್ಷಣದ ಬಗ್ಗೆ ತಿಳಿದ ತಜ್ಞರು ಇರಬೇಕು. ಆದರೆ ಇತ್ತೀಚಿಗೆ ಈ ವಿಧಾನದಲ್ಲಿ ಕುಲಪತಿಗಳ ಆಯ್ಕೆ ಪ್ರಕ್ರಿಯೆ ನಡೆಯದೇ ಜಾತಿ, ಹಣ, ರಾಜಕೀಯ ಪ್ರಭಾವ ಹಾಗೂ ಪ್ರಭಾವಿ ವ್ಯಕ್ತಿಗಳ ಶಿಫಾರಸುಗಳ ಮೂಲಕ ಕಲಪತಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಇದು ಉನ್ನತ ಶಿಕ್ಷಣದ ಗುಣಮಟ್ಟ ಕಡಿಮೆಯಾಗಲು ಕಾರಣವಾಗಿದೆ ಅಂತಾರೆ ಒಂದಿಷ್ಟು ಮಂದಿ.
ಇದನ್ನೂ ಓದಿ:ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ಪ್ರಾಮಾಣಿಕವಾಗಿ ನಡೆಯುತ್ತಿದೆಯೇ?
ಕುಲಪತಿಗಳ ನೇಮಕಾತಿ ಪ್ರಕ್ರಿಯೆ ಪ್ರತಿ 3 ವರ್ಷಕ್ಕೊಮ್ಮೆ ನಡೆಯುತ್ತಿದ್ದು, ಇದರಲ್ಲಿ ಹಣ, ರಾಜಕೀಯ ಪ್ರಭಾವ ನಡೆಯುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಉದಾಹರಣೆಗೆ ದೇಶದಲ್ಲೇ ಮೊದಲು ರಾಜ್ಯದ ಬೆಳಗಾವಿಯಲ್ಲಿ ಆರಂಭವಾದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ರಾಜ್ಯದಲ್ಲಿರುವ 350 ಇಂಜಿನಿಯರಿಂಗ್ ಕಾಲೇಜುಗಳು ಬರುತ್ತವೆ. ಆದರೆ ಈ ಇಂಜಿನಿಯರಿಂಗ್ ಕಾಲೇಜಿನ ಕುಲಪತಿಯೋಬ್ಬರು ನೇಮಕಾತಿ ಹಗರಣ ಹಾಗೂ ಕಟ್ಟಡ ನಿರ್ಮಾಣದಲ್ಲಿ ಹಗರಣ ಸೇರಿದಂತೆ ಹಲವಾರು ಹಗರಣದಲ್ಲಿ ನೇರವಾಗಿ ಭಾಗಿಯಾಗಿದ್ದು, ದೇಶದಲ್ಲೇ ಸುದ್ದಿಯಾಗಿತ್ತು. ಇದು ಕಲಪತಿಗಳ ನೇಮಕಾತಿಯಲ್ಲಿ ಸರಿಯಾದ ಮಾನದಂಡ ಅನುಸರಿಸದೇ ಇರುವುದು ಕಾರಣವಾಗಿದೆ.