ಮೈಸೂರು:ಬಸವರಾಜ ಬೊಮ್ಮಾಯಿ ಹೆಸರನ್ನು ಯಡಿಯೂರಪ್ಪ ಸೂಚಿಸಿದ್ದಾರೆ, ಈ ಕಾರಣದಿಂದ ಸರ್ಕಾರದ ಮೇಲೆ ಯಡಿಯೂರಪ್ಪನಿಂದ ಹಿಡಿತ ಹೊಂದಿರುತ್ತಾರೆ. ಇಂತಹ ಸಂದರ್ಭಗದಲ್ಲಿ ಸಿಎಂ ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವೇ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, ಈ ಬಗ್ಗೆ ನಾನು ಏನೂ ಹೇಳುವುದಿಲ್ಲ. ಅವರ ಆಡಳಿತವನ್ನು ಕಾದು ನೋಡೋಣ, ಒಳ್ಳೆ ಕೆಲಸ ಮಾಡಲಿ ಎಂದು ಆಶಿಸೋಣ ಎಂದರು.
ತಂದೆ ಗುಣ ಮಕ್ಕಳಿಗೆ ಬರುತ್ತದೆ ಎಂದು ಹೇಳಲು ಬರುವುದಿಲ್ಲ. ಅದೇ ರೀತಿ ಎಸ್.ಆರ್.ಬೊಮ್ಮಾಯಿ ಮಗ ತಂದೆಯಂತೆ ಆಗುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ. 'ಮಹಾತ್ಮ ಗಾಂಧೀಜಿ ಅವರ ಮಗ ಮಹಾತ್ಮನಾಗಲಿಲ್ಲ, ಕುಡುಕನಾದ' ಎಂದು ಉದಾಹರಣೆಯನ್ನು ಸಿದ್ದರಾಮಯ್ಯ ಹೇಳಿದರು.
ಮುಖ್ಯಮಂತ್ರಿ ಬದಲಾದರೆ ಎಲ್ಲವೂ ಬದಲಾಗುವುದಿಲ್ಲ ಯಡಿಯೂರಪ್ಪ ಇಳಿದು ಬೊಮ್ಮಾಯಿ ಸಿಎಂ ಆಗಿದ್ದಾರೆ ಅಂದಮಾತ್ರಕ್ಕೆ ಬಿಜೆಪಿಯ ಐಡಿಯಾಲಜಿಗಳು ಬದಲಾಗುವುದಿಲ್ಲ. ಬಿಜೆಪಿ ಕೋಮುವಾದಿ ,ಹಿಂದುತ್ವ ಅಜಂಡಾ ಬದಲಾಗುವುದಿಲ್ಲ. ಬಿಜೆಪಿಯವರು ಯಾವತ್ತೂ ಅಲ್ಪಸಂಖ್ಯಾತರು, ದಲಿತರು, ಬಡವರ ಪರವಾಗಿ ಇರುವುದಿಲ್ಲ. ಬಿಜೆಪಿ ಸರ್ಕಾರದಿಂದ ಯಾವುದನ್ನೂ ನಿರೀಕ್ಷೆ ಮಾಡುವುದಿಲ್ಲ. ಆದರೆ ಬಸವರಾಜ ಬೊಮ್ಮಾಯಿಗೆ ಒಂದು ಅವಕಾಶ ಸಿಕ್ಕಿದೆ. ಆ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಒಳ್ಳೆಯ ಆಡಳಿತ ನೀಡಲು ಎಂದು ಆಶಿಸುತ್ತೇನೆ ಎಂದರು.
ಯಡಿಯೂರಪ್ಪ ಬದಲಾವಣೆಗೆ ಅವರ ವಯಸ್ಸು ಒಂದೆ ಕಾರಣವಲ್ಲ ಭ್ರಷ್ಟಾಚಾರ, ನಿಷ್ಕ್ರಿಯ ಸರ್ಕಾರ ಹಾಗೂ ಮಗನ ಹಸ್ತಕ್ಷೇಪ ಹೆಚ್ಚಾಗಿದ್ದರಿಂದ ಅವರ ಬದಲಾವಣೆ ಆಯಿತು ಎಂದು ಇದೇ ಸಂದರ್ಭದಲ್ಲಿ ಹೇಳಿದರು.