ಮೈಸೂರು: ಈವರೆಗೆ ಕೇವಲ ನಗರ ಪ್ರದೇಶಗಳಿಗಷ್ಟೇ ಸಿಮಿತವಾಗಿದ್ದ ಡಿಜಿಟಲ್ ಪೇ ಹಾಗೂ ಕ್ಯೂಆರ್ ಕೋಡ್ ವ್ಯವಸ್ಥೆ ಈಗ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ. ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಹೊಸಕೋಟೆ ಗ್ರಾಮ ಪಂಚಾಯಿತಿಯಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ತೆರಿಗೆ ಸೇರಿದಂತೆ ಇತರ ಸೇವಾ ಶುಲ್ಕವನ್ನು ಕ್ಯೂಆರ್ ಕೋಡ್ ಮೂಲಕ ಪಾವತಿಸಲಾಗುತ್ತಿದೆ. ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಚಯಿಸಿದ ಪ್ರಥಮ ಪ್ರಯೋಗ ಇದಾಗಿದ್ದು, ಈ ವಿನೂತನ ಸೌಲಭ್ಯದಿಂದ ಸ್ಥಳೀಯರಿಗೆ ತುಂಬಾ ಅನುಕೂಲವಾಗಿದೆ. ಈ ಕ್ರಾಂತಿಕಾರಕ ಬದಲಾವಣೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಏನಿದು ಕ್ಯೂಆರ್ ಕೋಡ್? ಇದರ ಉಪಯೋಗ ಏನು:ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ವ್ಯವಸ್ಥೆ ಎಂದರೆ ಕೇವಲ ಮೊಬೈಲ್ ಮೂಲಕ ಶುಲ್ಕ ಪಾವತಿಸುವುದು. ಜನರು ತಮ್ಮ ಟ್ರೇಡ್ ಲೈಸೆನ್ಸ್ ಶುಲ್ಕದಿಂದ ಹಿಡಿದು ಕಟ್ಟಡ ನಿರ್ಮಾಣ ಪರವಾನಗಿ ಶುಲ್ಕ, ಹದ್ದುಬಸ್ತು, ನಾಡ ಕಚೇರಿ, ಕೇಬಲ್ ಅನುಮತಿ, ಜಾತಿ ಆದಾಯ ಪ್ರಮಾಣಪತ್ರ, ನೀರಿನ ಬಿಲ್ ಸೇರಿದಂತೆ ಇತರ ಶುಲ್ಕವನ್ನು ಮೊಬೈಲ್ ಮೂಲಕ ಪಾವತಿಸುವ ಸರಳ ವ್ಯವಸ್ಥೆಯಾಗಿದೆ. ಹೊಸಕೋಟೆ ಗ್ರಾಮದಲ್ಲಿ 5,600ಕ್ಕೂ ಹೆಚ್ಚು ಜನ ಸುಶಿಕ್ಷಿತರಿದ್ದು, ಶೇ. 75ರಷ್ಟು ಮಂದಿ ಸ್ಮಾರ್ಟ್ ಫೋನ್ಗಳನ್ನು ಹೊಂದಿದ್ದಾರೆ. ಇಲ್ಲಿನ ಬಾಪೂಜಿ ಸೇವಾ ಕೇಂದ್ರದ ಮೂಲಕ ಕ್ಯೂಆರ್ ಕೋಡ್ ಪರಿಚಯಿಸಲಾಗಿದ್ದು, ಇದರಿಂದ ಹಣ ನೇರವಾಗಿ ಬ್ಯಾಂಕ್ ಖಾತೆ ಸೇರುತ್ತದೆ. ಸಾರ್ವಜನಿಕರ ಸಮಯವೂ ಉಳಿತಾಯವಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪಾರದರ್ಶಕತೆ ಆಡಳಿತಕ್ಕೆ ಹೆಚ್ಚಿನ ಒತ್ತು ನೀಡಿದಂತಾಗಿದೆ.
ಕ್ಯೂಆರ್ ಕೋಡ್ ವ್ಯವಸ್ಥೆಯ ಪ್ರಚಾರ:ಗ್ರಾಮ ಪಂಚಾಯಿತಿಯಲ್ಲಿ ನೀಡುವ ಸೇವೆಗಳನ್ನು ಪಡೆಯಲು ಸಾರ್ವಜನಿಕರಿಗೆ ತೆರಿಗೆ ಮತ್ತು ಶುಲ್ಕಗಳನ್ನು ಪಾವತಿಸಲು ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲು ಸಾರ್ವಜನಿಕ ಸ್ಥಳಗಳಲ್ಲಿ ಈಗಾಗಲೇ ಕ್ಯೂಆರ್ ಕೋಡ್ಗಳನ್ನು ಅಂಟಿಸಿ ಪ್ರಚುರಪಡಿಸಲಾಗುತ್ತಿದೆ. ಆಡಳಿತಾತ್ಮಕ ದಕ್ಷತೆ ಮತ್ತು ಆರ್ಥಿಕ ದುರುಪಯೋಗವನ್ನು ಇದು ಕಡಿಮೆ ಮಾಡಿದೆ. ಜೊತೆಗೆ ಈ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಳಸಿಕೊಳ್ಳಲು ಗ್ರಾಮದಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳಲಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಈ ವಿನೂತನ ಸೌಲಭ್ಯದ ಬಗ್ಗೆ ಈಗಾಗಲೇ ಚರ್ಚೆ ಮಾಡಿದ್ದಾರೆ. ಇದರ ಸಫಲತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹೊಸಕೋಟೆ ಗ್ರಾಮ ಪಂಚಾಯಿತಿಯಲ್ಲಿ ಈ ವ್ಯವಸ್ಥೆ ಯಶಸ್ವಿಯಾದರೆ ಎಲ್ಲ ಗ್ರಾಮ ಪಂಚಾಯತಿಗಳಿಗೂ ವಿಸ್ತರಿಸಲು ಸಿಇಒ ಅವರು ಚಿಂತನೆ ನಡೆಸಿದ್ದಾರೆ.- ಎಂ.ಕೃಷ್ಣ ರಾಜು, ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ