ಮೈಸೂರು :ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಪ್ರಕಟಿಸಿರುವ ಸಂಶೋಧನಾ ಪ್ರಬಂಧಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರತ್ತಿದೆ. ವರ್ಷದ ಅತ್ಯುತ್ತಮ ಸಂಶೋಧನಾ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಈ ಮೂಲಕ ಮೈಸೂರು ವಿಶ್ವವಿದ್ಯಾನಿಲಯವು ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ವಿಶ್ವವಿದ್ಯಾಲಯದ ಪ್ರೊ.ರಂಗಪ್ಪ ಮತ್ತು ಡಾ.ಮೋಹನ್ ಸಿ.ಡಿ. ಪ್ರಾಧ್ಯಾಪಕರು ಸಲ್ಲಿಸಿರುವ ಸಂಶೋಧನಾ ಪ್ರಬಂಧವನ್ನು ಬಯೋಖಮಿ( biochimie) ಎಂಬ ಹೆಸರಿನ ಅಂತಾರಾಷ್ಟೀಯ ಜರ್ನಲ್ ಪ್ರಕಟಿಸಿದೆ.
ವರ್ಷದ ಅತ್ಯುತ್ತಮ ಸಂಶೋಧನಾ ಪ್ರಶಸ್ತಿಗೆ ಈ ಪ್ರಬಂಧವನ್ನ ಆಯ್ಕೆ ಮಾಡಲಾಗಿದೆ. ಈ ವಿಷಯವನ್ನ ಮೈಸೂರು ವಿವಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಪ್ರೊ.ರಂಗಪ್ಪ ಮತ್ತು ಡಾ.ಮೋಹನ್ ಸಿ.ಡಿ. ಯವರು ಅಂತಾರಾಷ್ಟ್ರೀಯ ಸಹಯೋಗಿಗಳೊಂದಿಗೆ ವಿಟೆಕ್ಸಿನ್ (ಪ್ಯಾಶನ್ ಫ್ಲವರ್‌ನಿಂದ ಪ್ರತ್ಯೇಕಿಸಲಾದ ರಾಸಾಯನಿಕ) ಮಾನವನ ಕ್ಯಾನ್ಸರ್‌ಗಳಲ್ಲಿ ಅತಿಯಾಗಿ ಕ್ರಿಯಾಶೀಲವಾಗಿರುವ STAT3 ಪ್ರೋಟೀನ್‌ನನ್ನು ಗುರಿಯಾಗಿಸಿಕೊಂಡು ಯಕೃತ್ತಿನ ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ ಎಂದು ಕಂಡು ಹಿಡಿದು ಅದರ ಬಗ್ಗೆ ಪ್ರಬಂಧವನ್ನು ಸಲ್ಲಿಸಿದ್ದರು. ವರ್ಷದ ಅತ್ಯುತ್ತಮ ಸಂಶೋಧನಾ ಪ್ರಶಸ್ತಿಗೆ ಆಯ್ಕೆ ಯಾಗಿದೆ.
ಪ್ರೊ.ರಂಗಪ್ಪ ಮತ್ತು ಡಾ.ಮೋಹನ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲು ಮತ್ತು ಉಪನ್ಯಾಸ ನೀಡಲು ಪ್ಯಾರಿಸ್ನ ಫ್ರಾನ್ಸ್ ವಿಶ್ವವಿದ್ಯಾಲಯ ಜುಲೈ 4 ಮತ್ತು 5 ಕ್ಕೆ ಆಹ್ವಾನವನ್ನು ನೀಡಿದೆ. ಪ್ರಾಧ್ಯಾಪಕರುಗಳಾದ ಪ್ರೊ.ರಂಗಪ್ಪ ಮತ್ತು ಡಾ.ಮೋಹನ್ ರವರು ಮಾನವನ ವಿವಿಧ ಕ್ಯಾನ್ಸರ್ ಗಳ ವಿರುದ್ಧ ಕ್ಯಾನ್ಸರ್ ನಿವಾರಕ ಸಂಯುಕ್ತಗಳ ಆವಿಷ್ಕಾರ ಮಾಡಿದ್ದು, ಅಂತರಾಷ್ಟ್ರೀಯ ಜರ್ನಲ್ಗಳಲ್ಲಿ ಪ್ರಕಟಿಸಿದ್ದಾರೆ.
ಪ್ರೊ. ರಂಗಪ್ಪನವರು ಮೈಸೂರು ವಿವಿಯ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ ನಂತರ ಪ್ರತಿಷ್ಠಿತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ.ಮೋಹನ್ ಸಿ.ಡಿ. ಅವರು ಮೈಸೂರು ವಿವಿಯ ಗಂಗೋತ್ರಿಯ ಅಣುಜೀವ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ಮೈಸೂರು ವಿವಿಯ ಸಂಶೋಧನಾ ಪ್ರಬಂಧ ಅತ್ಯುತ್ತಮ ಸಂಶೋಧನಾ ಕೃತಿಯಾಗಿ ಆಯ್ಕೆಯಾಗಿರುವುದಕ್ಕೆ ಪ್ರೊ ರಂಗಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.