ಮೈಸೂರು : ಕೆ.ಆರ್.ಆಸ್ಪತ್ರೆಯಲ್ಲಿ ನೂರು ಬೆಡ್ಗಳಿರುವ ಡಯಾಲಿಸಿಸ್ ಸೆಂಟರ್ ಮಾಡಬೇಕೆಂಬುದು ನಮ್ಮ ಉದ್ದೇಶ. ಇದು ನನ್ನ ವೈಯಕ್ತಿಕ ಆಸೆಯೂ ಹೌದು, ಅಗತ್ಯವೂ ಹೌದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಇಂದು (ಮಂಗಳವಾರ) ಕೆ.ಆರ್.ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಮೈಸೂರಿನ ಆಸ್ಪತ್ರೆಯ ನವೀಕರಣಕ್ಕೆ 89 ಕೋಟಿ ರೂ ಮಂಜೂರು ಮಾಡಿತ್ತು. ಅಲ್ಲದೇ, ಹೊಸ ಎಂಆರ್ಐ ಸ್ಕ್ಯಾನಿಂಗ್ ಮಷಿನ್ ಹಾಕಲು 10 ಕೋಟಿ ಹಣ ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ಇದರ ಕಾಮಗಾರಿ ವೀಕ್ಷಣೆಗೆ ನಾನು ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಆಸ್ಪತ್ರೆಯ ನವೀಕರಣ ಕಾಮಗಾರಿಗೆ ಹಣ ಬಿಡುಗಡೆ ಮಾಡಿದ ಈ ಹಿಂದಿನ ಸರಕಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವರಾಗಿದ್ದ ಡಾ.ಕೆ. ಸುಧಾಕರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಆಸ್ಪತ್ರೆಯನ್ನು ನಮ್ಮ ಮೈಸೂರು ಮಹಾರಾಜರು ನಿರ್ಮಾಣ ಮಾಡಿದ್ದು, ಮುಂದಿನ ವರ್ಷ 2024ರ ಜುಲೈ ತಿಂಗಳಿಗೆ ಮೈಸೂರು ಮೆಡಿಕಲ್ ಕಾಲೇಜು ಸ್ಥಾಪನೆಯಾಗಿ 100 ವರ್ಷ ತುಂಬುತ್ತದೆ. ಶತಮಾನೋತ್ಸವ ಸಂದರ್ಭದಲ್ಲಿ ಆಸ್ಪತ್ರೆಯೂ ಕೂಡ ಸಂಪೂರ್ಣವಾಗಿ ನವೀಕರಣಗೊಂಡು ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಬೇಕೆಂಬುದು ನಮ್ಮ ಉದ್ದೇಶ. ಈ ಬಗ್ಗೆ ಮೊನ್ನೆ ಜಿಲ್ಲಾ ಪಂಚಾಯತ್ನಲ್ಲಿ ನಡೆದ ದಿಶಾ ಕಮಿಟಿ ಸಭೆಯಲ್ಲೂ ಚರ್ಚೆ ನಡೆಸಿದ್ದೇನೆ. ಒಂದು ಬಿಲ್ಡಿಂಗ್ ಗುರುತಿಸಿ ಅಲ್ಲಿ ಡಯಾಲಿಸಿಸ್ ಸೆಂಟರ್ ಮಾಡೇ ಮಾಡುತ್ತೇವೆ. ಈಗಾಗಲೇ ಅಧಿಕಾರಿಗಳು ಬಿಲ್ಡಿಂಗ್ ಗುರುತಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.