ಮೈಸೂರು : ಜಿಲ್ಲೆಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಈ ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಬೋನುಗಳನ್ನ ಅಳವಡಿಸಲಾಗಿದೆ. ಈ ಬೋನುಗಳಿಗೆ ಬೀಳುವ ಚಿರತೆಗಳನ್ನು ಅರಣ್ಯ ಇಲಾಖೆ ಕಾಡಿಗೆ ಬಿಡುವ ಮುನ್ನ ಮೈಕ್ರೋ ಚಿಪ್ ಅಳವಡಿಸುವ ಕಾರ್ಯವನ್ನು ಮಾಡುತ್ತಿದೆ. ಇನ್ನು, ಈ ಚಿರತೆಗಳಿಗೆ ಮೈಕ್ರೋ ಚಿಪ್ನನ್ನು ಹೇಗೆ ಅಳವಡಿಸಲಾಗುತ್ತದೆ ಎಂಬ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಬಸವರಾಜು ಅವರು 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.
ಇನ್ನು, ಜಿಲ್ಲೆಯಲ್ಲಿ ಚಿರತೆ ಹಾವಳಿ, ಚಿರತೆ ದಾಳಿ, ಚಿರತೆ ಸೆರೆ ಸುದ್ದಿಗಳನ್ನು ನಾವು ನೋಡಿರುತ್ತೇವೆ. ಹೀಗೆ ಸೆರೆ ಸಿಕ್ಕ ಚಿರತೆಗಳನ್ನು ಕಾಡಿಗೆ ಬಿಡುವ ಮುನ್ನ ಅರಣ್ಯ ಇಲಾಖೆ ಅವುಗಳಿಗೆ ಮೈಕ್ರೋ ಚಿಪ್ ಅಳವಡಿಸುತ್ತದೆ. ಇದು ಈ ಚಿರತೆಗಳ ಮೇಲೆ ನಿಗಾ ಇಡಲು ಸಹಕಾರಿಯಾಗುತ್ತದೆ. ಈ ಸೆರೆ ಸಿಕ್ಕ ಚಿರತೆಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿ ಅವುಗಳಿಗೆ ಮೈಕ್ರೋ ಚಿಪ್ ಅಳವಡಿಸುತ್ತಾರೆ.
ಮೈಕ್ರೋ ಚಿಪ್ ಅಳವಡಿಕೆ ಹೇಗೆ ?: ಬೋನಿನಲ್ಲಿ ಸೆರೆ ಸಿಕ್ಕ ಚಿರತೆಗಳಿಗೆ ಮೈಕ್ರೋ ಚಿಪ್ ಅಳವಡಿಕೆ ಯೋಜನೆಯನ್ನು ಅರಣ್ಯ ಇಲಾಖೆ ಕೈಗೊಂಡಿದೆ. ಸೆರೆ ಸಿಕ್ಕ ಚಿರತೆಯ ಬಾಲದ ಬುಡದಲ್ಲಿ ನೀಡಲ್ ತರದ ಒಂದು ಮೈಕ್ರೋ ಚಿಪ್ನ್ನು ಅಳವಡಿಸಲಾಗುತ್ತದೆ. ಈ ಮೈಕ್ರೋ ಚಿಪ್ ನಲ್ಲಿ ಬಾರ್ ಕೋಡ್ ರೀತಿಯ ಗುರುತು ಹಾಗೂ ಒಂದು ಯೂನಿಕ್ ನಂಬರ್ ಇರುತ್ತದೆ. ಈ ನಂಬರ್ ಪರಿಶೀಲಿಸಿದಾಗ ಈ ಚಿರತೆಯನ್ನು ಹಿಂದೆ ಎಲ್ಲಿ ಸೆರೆ ಹಿಡಿಯಲಾಗಿತ್ತು, ವಯಸ್ಸು, ಗಂಡು ಅಥವಾ ಹೆಣ್ಣೋ, ಎಷ್ಟು ಜನರ ಮೇಲೆ ದಾಳಿ ಮಾಡಿದೆ ಈ ರೀತಿಯ ಎಲ್ಲಾ ಮಾಹಿತಿಯನ್ನು ಮೈಕ್ರೋ ಚಿಪ್ನಲ್ಲಿ ಅಳವಡಿಸಲಾಗಿರುತ್ತದೆ.